

ಗಂಗೊಳ್ಳಿ: ಮರವಂತೆ ಶ್ರೀ ರಾಮ ಮಂದಿರದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಅಖಂಡ ಏಕಾಹ ಭಜನೆ, ಪುರಮೆರವಣಿಗೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀರಾಮ ನವಮಿ ಅಂಗವಾಗಿ ದೇವಸ್ಥಾನ ಪ್ರಾಂಗಣವನ್ನು ವಿವಿಧ ಬಗೆಯ ಹೂಗಳಿಂದ ಶೃಂಗರಿಸಲಾಗಿತ್ತು. ಬೆಳಗಿನಿಂದಲೂ ಭಕ್ತರು ದೇವರ ದರ್ಶನಕ್ಕೆ ಆಗಮಿಸಿದ್ದು ರಾಮ ನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಭಜನಾ ಮಂಡಳಿ, ಮೀನುಗಾರರು ಹಾಗೂ ಭಕ್ತರು ಅಖಂಡ ಏಕಾಹ ಭಜನೆಯಲ್ಲಿ ಪಾಲ್ಗೊಂಡು ಭಜನಾ ಸೇವೆ ಸಮರ್ಪಿಸಿದರು.
ಸಂಜೆ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಪುರ ಮೆರವಣಿಗೆ ನಡೆಸಲಾಯಿತು. ಶ್ರೀ ರಾಮ ಮಂದಿರದ ಬಳಿಯಿಂದ ಹೊರಟ ಮೆರವಣಿಗೆ ರಾ.ಹೆ.66ರ ಮೂಲಕ ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನದ ತನಕ ಬಳಿಕ ಕರಾವಳಿ ಮಾರ್ಗದ ಮೂಲಕ ವಾಪಸ್ಸಾಯಿತು. ಮಾರ್ಗದುದ್ದಕ್ಕೂ ಭಕ್ತರು ಹಣ್ಣುಕಾಯಿ, ಆರತಿ ಸೇವೆ ಸಮರ್ಪಿಸಿದರು. ಸಹಸ್ರಾರು ಭಕ್ತರು ಪುರಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶೇಖರ ಖಾರ್ವಿ, ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರು, ಪುರೋಹಿತರು, ಮೀನುಗಾರರು, ಮತ್ತಿತರರು ಉಪಸ್ಥಿತರಿದ್ದರು.