

ಬೆಂಗಳೂರು: ಏಷ್ಯಾ, ಇಂಡಿಯಾ ಹಾಗೂ ನೊಬೆಲ್ ಬುಕ್ ಆಫ್ ರೆಕಾರ್ಡ್ಸ್ಗೆ ಪಾತ್ರಳಾಗಿರುವ, ಭಾರತದ ಕಿರಿಯ ಕವಯಿತ್ರಿ ಎಂದೇ ಹೆಸರಾಗಿರುವ ಅಮನ ಜೆ. ಕುಮಾರ್ ಬರೆದಿರುವ ಎರಡನೇ ಕವನ ಸಂಕಲನವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇಂದು ರಾಜಭವನದಲ್ಲಿ ಬಿಡುಗಡೆ ಮಾಡಿದರು.
'ವರ್ಲ್ಡ್ ಅಮಿಡ್ಸ್ಟ್ ದ ವರ್ಡ್ಸ್' (World Amidst the Words ) ಎಂಬ ಹೆಸರಿನ ಈ ಕವನ ಸಂಕಲನ 155 ಕವಿತೆಗಳನ್ನು ಹೊಂದಿದೆ. ಪ್ರಕೃತಿ, ಕೋವಿಡ್, ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ, ಕೃತಜ್ಞತೆ, ಮಾನವೀಯತೆ, ಸಮಾಜ, ದೇಶ, ಜೀವನಪ್ರೀತಿ, ಕನಸು, ಅನುಭವ, ಮಹತ್ವಾಕಾಂಕ್ಷೆ ಮುಂತಾದವುಗಳ ಕುರಿತ ಸ್ವಾರಸ್ಯಕರ ತಿರುಳಿರುವ ಕವನ ಸಂಕಲನ ಇದಾಗಿರುತ್ತದೆ.
ಇದನ್ನೂ ಓದಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್ಗೆ ಬೆಂಗಳೂರಿನ ಅಮನ
ಅಮನಳ ಮೊದಲ ಕವನ ಸಂಕಲನ 'ಇಕೋಸ್ ಆಫ್ ಸೌಲ್ಫುಲ್ ಪೊಯೆಮ್ಸ್' (Echos of Soulful Poems) ಕಳೆದ ಡಿಸೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಅಮನ ಜೆ. ಕುಮಾರ್ ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಕವನಗಳನ್ನು ವಿವಿಧ ವಿಷಯಗಳ ಬಗ್ಗೆ ಬರೆದಿರುವುದಕ್ಕಾಗಿ ಹಾಗೂ ಅತಿ ಕಿರಿಯ ಕವಯಿತ್ರಿ ಎಂಬ ಹಿನ್ನೆಲೆಯಲ್ಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್', 'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' ಹಾಗೂ 'ನೊಬೆಲ್ ಬುಕ್ ಆಫ್ ರೆಕಾರ್ಡ್ಸ್'ಗೆ ಪಾತ್ರಳಾಗಿದ್ದಾಳೆ.
ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನ ಎಂಟನೇ ತರಗತಿಯ ವಿದ್ಯಾರ್ಥಿನಿ ಹಾಗೂ ಕೆಎಸ್ಆರ್ಟಿಸಿಯ ಚೀಫ್ ಪಬ್ಲಿಕ್ ರಿಲೇಷನ್ ಆಫೀಸರ್ ಡಾ.ಟಿ.ಎಸ್. ಲತಾ ಅವರ ಪುತ್ರಿ. ಅಮನಳ ಪುಸ್ತಕವು ಆನ್‍ಲೈನ್ ತಾಣಗಳಾದ ಅಮೆಜಾನ್, ಫ್ಲಿಪ್‍ಕಾರ್ಟ್, ಪ್ಲೇಸ್ಟೋರ್, ಎವಿನ್ಸ್ ಪಬ್ಲಿಷಿಂಗ್‍ಗಳಲ್ಲಿ ಲಭ್ಯವಿದೆ.