ಬೆಂಗ್ಳೂರು ತೊರೆದ 83,880 ಕಾರ್ವಿುಕರು

corona
Published on

ಬೆಂಗಳೂರು: ವಲಸೆ ಕಾರ್ವಿುಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆ ನಾಲ್ಕನೇ ದಿನವೂ ಮುಂದುವರಿದಿದ್ದು, ಇನ್ನೂ ಎರಡು ದಿನ ನಡೆಯಲಿದೆ. ನಾಲ್ಕು ದಿನಗಳಲ್ಲಿ 83,880 ಕಾರ್ವಿುಕರನ್ನು ಕೆಎಸ್​ಆರ್​ಟಿಸಿ ಬಸ್ ಮೂಲಕ ಊರುಗಳಿಗೆ ಕಳುಹಿಸಲಾಗಿದೆ. ಅದರಲ್ಲಿ ಮಂಗಳವಾರ ಒಂದೇ ದಿನ ಬೆಂಗಳೂರಿನಿಂದ 488 ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ 322 ಬಸ್​ಗಳ ಮೂಲಕ 24 ಸಾವಿರ ಕಾರ್ವಿುಕರು ಸಂಚರಿಸಿದ್ದಾರೆ.

ಬಸ್ ನಿಲ್ದಾಣಕ್ಕೆ ಬಂದ ಪ್ರತಿ ಕಾರ್ವಿುಕರಿಗೆ ಮಂಗಳವಾರವೂ ಮೂರು ಹೊತ್ತು ಆಹಾರ ವಿತರಿಸಲಾಯಿತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಳಗ್ಗೆಯಿಂದ ಸಂಜೆವರೆಗೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿಯೇ ಇದ್ದು ಕಾರ್ವಿುಕರ ಆಹಾರ ವಿತರಣೆ ಮತ್ತು ಆರೋಗ್ಯ ತಪಾಸಣೆಯನ್ನು ಪರಿಶೀಲನೆ ನಡೆಸಿದರು.

72 ಸ್ಥಳಗಳಿಗೆ ಸೇವೆ: ಕಾರ್ವಿುಕರು ತೆರಳುವ ಸ್ಥಳವನ್ನಾಧರಿಸಿ ಕೆಎಸ್​ಆರ್​ಟಿಸಿ ಸೇವೆ ನೀಡುತ್ತಿದೆ. ಸೋಮವಾರ 97 ಸ್ಥಳಗಳಿಗೆ ಬಸ್ ಸೇವೆ ನೀಡಲಾಗಿತ್ತು. ಮಂಗಳವಾರ ಕಾರ್ವಿುಕರ ಸಂಖ್ಯೆ ಕಡಿಮೆಯಾಗಿದ್ದು, 72 ಸ್ಥಳಗಳಿಗೆ ಬಸ್​ಗಳು ಸಂಚರಿಸಿವೆ.

ಇಬ್ಬರಿಗೆ ಜ್ವರ: ಬಹುತೇಕ ಕಾರ್ವಿುಕರು ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುವ ಕಾರಣದಿಂದ ದೇಹದ ತಾಪ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರತಿ ಕಾರ್ವಿುಕರನ್ನು ತಪಾಸಣೆಗೊಳಪಡಿಸುವುದಕ್ಕೂ ಮುನ್ನ ಅವರನ್ನು ನೆರಳಲ್ಲಿ ಕೂರಿಸಿ ತಪಾಸಣೆ ಮಾಡಲಾಗುತ್ತಿದೆ. ಅದರ ನಡುವೆಯೂ ಇಬ್ಬರು ಕಾರ್ವಿುಕರಿಗೆ ಜ್ವರವಿರುವುದು ದೃಢಪಟ್ಟಿದೆ. ನಂತರ ಅವರನ್ನು ಬಿಬಿಎಂಪಿ ಫೀವರ್ ಕ್ಲೀನಿಕ್​ನಲ್ಲಿ ಪರೀಕ್ಷೆಗೊಳಪಡಿಸಲಾಯಿತು.

ವಲಸಿಗರ ಪ್ರಯಾಣಕ್ಕೆ ಕ್ರಮವೇನು?:  ಹೊರ ರಾಜ್ಯಗಳಿಗೆ ಸೇರಿದ ವಲಸೆ ಕಾರ್ವಿುಕರನ್ನು ಅವರ ಊರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಲಾಕ್​ಡೌನ್ ಸಂದರ್ಭ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನನುಕೂಲತೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರಲ್ಲೊಬ್ಬರಾದ ಪಿಯುಸಿಎಲ್ ಪರ ವಕೀಲರು, ವಸ್ತು ಪ್ರದರ್ಶನಾಲಯ ಮೈದಾನದ ಶೆಡ್​ಗಳಲ್ಲಿ ಆಶ್ರಯ ಪಡೆದಿದ್ದ ಹೊರ ರಾಜ್ಯಗಳ ಸಾವಿರಾರು ವಲಸೆ ಕಾರ್ವಿುಕರು ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದರು.

ಬಿಲ್ಡರ್​ಗಳ ಜತೆ ಸಿಎಂ ಸಭೆ: ಕಾರ್ವಿುಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಮತ್ತು ಬಿಲ್ಡರ್ಸ್ ಜತೆ ಸಭೆ ನಡೆಸಿ, ಕೂಡಲೇ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದರು. ಪ್ರತಿ ದಿನವೂ ಕಾರ್ವಿುಕರು ದಂಡು ದಂಡಾಗಿ ಬೆಂಗಳೂರಿನಿಂದ ತಮ್ಮ ಊರಿನತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸಿಎಂ, ಕಾರ್ವಿುಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವಂತೆಯೂ ತಾಕೀತು ಮಾಡಿದ್ದಾರೆ.

ವದಂತಿಗಳಿಗೆ ಕಿವಿಗೊಡದಿರಿ: ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಕಾರ್ವಿುಕರು ವದಂತಿಗಳಿಗೆ ಕಿವಿಗೊಡದೆ ಅನಗತ್ಯ ಪ್ರಯಾಣ ಮಾಡುವ ಯೋಜನೆ ಕೈಬಿಡುವಂತೆ ಮನವಿ ಮಾಡಿದರು. ಅಲ್ಲದೆ, ಈ ರೀತಿ ಆತಂಕಕ್ಕೆ ಒಳಗಾಗಿರುವ ಕಾರ್ವಿುಕರ ಮನವೊಲಿಸಲು ಸಚಿವರಿಗೆ ಸೂಚಿಸಲಾಗಿದೆ ಎಂದರು. ಲಾಕ್​ಡೌನ್ ಸಂದರ್ಭದಲ್ಲಿ ಸರ್ಕಾರ ನಿಮ್ಮ ಹಿತ ಕಾಯುವ ಕೆಲಸ ಮಾಡಿದೆ. ತಮ್ಮಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಒಂದೂವರೆ ತಿಂಗಳಿಂದ ಉತ್ತಮ ಊಟ ಮತ್ತು ಸಂಬಳ ನೀಡಿದ್ದೇವೆ ಎಂದು ಬಿಲ್ಡರ್​ಗಳು ತಿಳಿಸಿದ್ದಾರೆ. ಮುಂದೆಯೂ ಸರ್ಕಾರ ನಿಮ್ಮ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿದೆ. ನಾ ನಿಮ್ಮ ಜತೆಗಿದ್ದೇನೆ ಎಂದು ಸಿಎಂ ಅಭಯ ನೀಡಿದರು.

ಕೈಗಾರಿಕಾ ಚಟುವಟಿಕೆ: ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ಇತರ ರಾಜ್ಯಗಳಿಗೆ ಹೋಲಿಸಿದರೆ ಹತೋಟಿಯಲ್ಲಿದೆ ಎಂಬುದನ್ನು ಕೈಗಾರಿಕೋದ್ಯಮಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ. ಈ ನಿಟ್ಟಿನಲ್ಲಿ ಕೆಂಪು ವಲಯ ಹೊರತು ಪಡಿಸಿ, ಇನ್ನುಳಿದ ಪ್ರದೇಶಗಳಲ್ಲಿ ವ್ಯಾಪಾರ, ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸುವಂತೆ ತಿಳಿಸಲಾಗಿದೆ ಎಂದ ಬಿಎಸ್​ವೈ, ಖಾಸಗಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಬಸ್​ಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net