ವಿಶ್ವ ಮಹಿಳಾ ದಿನಾಚರಣೆ: ಹುಬ್ಬಳ್ಳಿಯಲ್ಲಿ ವಾಕಾಥಾನ್​ಗೆ ಚಾಲನೆ, ವಿಜಯವಾಣಿ- ದಿಗ್ವಿಜಯ ನ್ಯೂಸ್ ಆಯೋಜನೆ

Hubli Walthon
Published on

ಹುಬ್ಬಳ್ಳಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜನೆಗೊಂಡಿರುವ ಬೃಹತ್ ವಾಕಥಾನ್​ಗೆ ನಟಿ ತಾರಾ, ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್​ನ ಕಾರ್ಯನಿರ್ವಾಹಕ‌ ನಿರ್ದೇಶಕಿ ಶ್ರೀಮತಿ ವಾಣಿ‌ ಸಂಕೇಶ್ವರ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಅವರು ಇಂದು (ಮಾ.8) ಬೆಳಗ್ಗೆ ಚಾಲನೆ ನೀಡಿದರು.

ನಗರದ ಚೆನ್ನಮ್ಮ ವೃತ್ತದಿಂದ ಆರಂಭವಾಗಿರುವ ವಾಕಥಾನ್ ದೇಸಾಯಿ ವೃತ್ತದ ಮಾರ್ಗವಾಗಿ​ ತಲುಪಿ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮುಕ್ತಾಯವಾಗಲಿದೆ. ವಾಕಥಾನ್​​ನಲ್ಲಿ ನೂರಾರು ಮಹಿಳೆಯರು ತುಂಬಾ ಉತ್ಸಾಹದಿಂದ ಭಾಗವಹಿಸಿದ್ದಾರೆ. ಮಹಿಳೆಯರ ಸಮಾನತೆಗಾಗಿ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ವಾಕಥಾನ್ ನಡೆಯುತ್ತಿದೆ.

ವಾಕಥಾನ್ ಬಳಿಕ 9 ಗಂಟೆಗೆ ಸವಾಯಿ ಗಂಧರ್ವ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿತ್ರ ನಟಿ ತಾರಾ ಹಾಗೂ ಬಸವಧಾಮದ ಬಸವೇಶ್ವರಿ ಮಾತಾಜಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಚಿತ್ರನಟಿ ತಾರಾ ಚಾಲನೆ ನೀಡಲಿದ್ದಾರೆ.

ಮಹಿಳಾ ದಿನಾಚರಣೆ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಆದರ್ಶ ದಂಪತಿ ಸ್ಪರ್ಧೆ ಹಿನ್ನೆಲೆ ಆಯ್ದ ಆದರ್ಶ ದಂಪತಿಗಳ ವಿಡಿಯೋ ಪ್ರದರ್ಶನ ಹಾಗೂ ಸ್ಮರಣಿಕೆಯನ್ನು ವಿತರಣೆ ಮಾಡಲಾಗುತ್ತದೆ. ಇದಾದ ಬಳಿಕ ವೀರ ವನಿತೆಯರ ವಿವಿಧ ವೇಷಭೂಷಣ ಸ್ಪರ್ಧೆ ನಡೆಯಲಿದೆ. ವೀರ ವನಿತೆಯರ ವೇಷ ಭೂಷಣ ಸ್ಪರ್ಧೆ ನಂತರ ಹಲವು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net