More

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನೀಡಲಾಗುವ ವರ್ಷದ ಮಹಿಳೆ ಪ್ರಶಸ್ತಿಯನ್ನು ಐವರು ಸಾಧಕಿಯರಿಗೆ ಇಂದು ಪ್ರದಾನ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಈ ಮಹಿಳೆಯರ ಕಿರುಪರಿಚಯವನ್ನು ಇಲ್ಲಿ ನೀಡಲಾಗಿದೆ.

    ಸಾಲದ ಸುಳಿಯಿಂದ ಸಾಧನೆಯ ಹಾದಿಯಲ್ಲಿ…

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ಸಾಲದ ಸುಳಿಗೆ ಸಿಲುಕಿ ಜೀವನ ಸಾಕು ಎಂದು ನಿರ್ಧರಿಸಿದ್ದ ಅವರು ಈಗ ಇತರರಿಗೆ ಸಾರ್ಥಕ ಜೀವನದ ಮಾದರಿಯಾಗಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದ ಪುಟ್ಟಮ್ಮಹಸು, ನಾಟಿಕೋಳಿ ಸಾಕಣೆ ಜತೆಗೆ ರೇಷ್ಮೆ ಕರಕುಶಲ ಉತ್ಪನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.

    ಮೊದಲಿಗೆ ಸ್ವಸಹಾಯ ಸಂಘದ ಮೂಲಕ ಸಾಲ ಪಡೆದು 3 ಹಸುಗಳನ್ನು ಖರೀದಿಸಿದರು. ಜಮೀನಿನಲ್ಲಿ ಸೀಮೆಹುಲ್ಲು ಬೆಳೆದು ಹಸುಗಳನ್ನು ಸಾಕಿದರು. ಹಸುಗಳಿಂದ ದಿನಕ್ಕೆ 40 ಲೀಟರ್​ನಷ್ಟು ಹಾಲನ್ನು ಡೇರಿಗೆ ಹಾಕತೊಡಗಿದರು. ಜತೆಗೆ ಮೇಕೆಗಳನ್ನೂ ಸಾಕಿದರು. ಹಸು, ಮೇಕೆಗಳ ಸಗಣಿ, ಒಣಗಿದ ಮರದ ಎಲೆಗಳಿಂದ ತೊಟ್ಟಿ ನಿರ್ವಹಿಸಿ ಅದನ್ನು ಪೈಪ್ ಮೂಲಕ ಜಮೀನಿಗೆ ಹಾಯಿಸಿ 3 ಎಕರೆಯಲ್ಲಿ ಬಗೆಬಗೆಯ ಸೊಪ್ಪು ತರಕಾರಿ ಬೆಳೆದು ಸ್ವಂತ ವಾಹನದಲ್ಲಿ ಬೆಂಗಳೂರಿನ ಮಾರ್ಕೆಟ್​ಗೆ ಕೊಂಡೊಯ್ದು ಲಕ್ಷಾಂತರ ರೂ. ಸಂಪಾದಿಸಿದರು.

    ‘ಕೃಷಿ ಡಿಪ್ಲೊಮಾ’ ಮಾಡುವ ಛಲದೊಂದಿಗೆ ಓದಲಾರಂಭಿಸಿ ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆಯಾದರು. ಕೇಂದ್ರದ ಕೃಷಿ ಮಂತ್ರಾಲಯದ ನ್ಯಾಷನಲ್ ಅಗ್ರಿಕಲ್ಚರಲ್ ಎಕ್ಸ್​ಟೆನ್ಶನ್ ಮ್ಯಾನೇಜ್​ವೆುಂಟ್ ಸಂಸ್ಥೆ ನಡೆಸುವ ಡಿಪ್ಲೊಮಾ ಕೋರ್ಸ್​ನಲ್ಲೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದರು.

    ಶ್ರೀಕಂಠೇಶ್ವರ ಸ್ವಸಹಾಯ ಸಂಘ ಕಟ್ಟಿ ಮಹಿಳೆಯರಿಗೆ ಹೈನುಗಾರಿಕೆ, ರೇಷ್ಮೆ, ಹೊಲಿಗೆ ತರಬೇತಿ, ಗುಡಿ ಕೈಗಾರಿಕೆ ತರಬೇತಿ ನೀಡಿ, ಸ್ವಸಹಾಯ ಸಂಘಗಳಿಂದ ಸಾಲ ಕೊಡಿಸಿ ಮಾರ್ಗದರ್ಶಕರಾದರು.

    ರೇಷ್ಮೆ ಕರಕುಶಲ ವಸ್ತುಗಳು ಅಂದರೆ ಹಾರ ಸೇರಿದಂತೆ ವಿಭಿನ್ನ ಬಗೆಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇವರ ಕೃಷಿ ಚಟುವಟಿಕೆಗೆ ಗಂಡ ಶ್ರೀಕಂಠೇಗೌಡ ಮತ್ತು ಇಬ್ಬರು ಮಕ್ಕಳು ಸಾಥ್ ನೀಡುತ್ತಾರೆ.

    ಹಲವಾರು ತರಬೇತಿಗಳಲ್ಲಿ ಭಾಗವಹಿಸಿ ಸಾವಯವ ಕೃಷಿ ಬಗ್ಗೆ ಸಲಹೆ ನೀಡುವ ಪುಟ್ಟಮ್ಮ ಅವರು ಅನೇಕ ಕೃಷಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಕಬಡ್ಡಿ ಹಾಗೂ ಹ್ಯಾಂಡ್​ಬಾಲ್ ಆಟಗಾರ್ತಿಯೂ ಆಗಿರುವ ಅವರು, ಈಜು, ಕರಾಟೆಯನ್ನೂ ಕಲಿತಿದ್ದಾರೆ. ಕೃಷಿ ಇಲಾಖೆ ಜಿಲ್ಲಾ ಸಲಹಾ ಸಮಿತಿ ಸದಸ್ಯರಾಗಿದ್ದ ಅವರು, ಸದ್ಯ ಭಾರತ್ ಕಿಸಾನ್ ಸಂಘದ ಜಿಲ್ಲಾ ಪ್ರಮುಖ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಛಲಕ್ಕೆ ಒಲಿದ ಪದಕ

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ಕುಸ್ತಿಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಈ ಯುವತಿ ಬಡತನದಲ್ಲಿ ಅರಳಿದ ಪ್ರತಿಭೆ. ಗದಗ ತಾಲೂಕಿನ ಅಸುಂಡಿ ಗ್ರಾಮದ ಪ್ರೇಮಾ ಹುಚ್ಚಣ್ಣವರ 23ನೇ ವಯಸ್ಸಿನಲ್ಲಿ ಕುಸ್ತಿಯಲ್ಲಿ ಉತ್ತುಂಗಕ್ಕೆ ಏರಿದ್ದಾರೆ. ಅವರ ಕರ್ಮಭೂಮಿ ಲಕ್ಕುಂಡಿ ಗ್ರಾಮ. ಲಕ್ಕುಂಡಿಯ ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಅವರ ಗರಡಿಯಲ್ಲಿ ಪಳಗಿದ್ದಾರೆ. ರಮೇಶರಡ್ಡಿ ಹಾಗೂ ಯಲ್ಲಮ್ಮ ಹುಚ್ಚಣ್ಣವರ ದಂಪತಿಯ ಹಿರಿಯ ಮಗಳಾದ ಪ್ರೇಮಾ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಕಂಡರು. ತಂದೆ ಹಾಗೂ ತಾಯಿ ಕೃಷಿಕರಾಗಿದ್ದು, ಅಗತ್ಯವಿರುವ ಎಲ್ಲ ಅನುಕೂಲ ಕಲ್ಪಿಸಿಕೊಡುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಛಲಬಿಡದ ಪ್ರೇಮಾ ಪ್ರತಿಕೂಲ ಪರಿಸ್ಥಿತಿಯಲ್ಲೂ ನಿರಂತರ ಪರಿಶ್ರಮದಿಂದ ಸಾಧನೆಯ ಶಿಖರ ಮುಟ್ಟಿದ್ದಾರೆ.

    ಗ್ರಾಮೀಣ ಭಾಗದಲ್ಲಿ ಬೆಳೆದ ನಾನು ಅವಮಾನಕ್ಕೆ ಗುರಿಯಾಗಿದ್ದೆ. ನನ್ನ ತಲೆಗೂದಲ ಕಟಿಂಗ್ ನೋಡಿ ನಕ್ಕು ಅಪಹಾಸ್ಯ ಮಾಡಿದ್ದರು. ಆದರೆ, ದೃಢ ನಿರ್ಧಾರದಿಂದ ಮುನ್ನಡೆದರೆ ಸಾಧನೆ ಸಾಧ್ಯ.

    | ಪ್ರೇಮಾ ಹುಚ್ಚಣ್ಣವರ ಕುಸ್ತಿಪಟು

    ಸಾಧನೆಗಳು

    • 2012ರಲ್ಲಿ ರ್ಕಿಗಿಸ್ತಾನ್​ನಲ್ಲಿ ಏರ್ಪಾಟಾಗಿದ್ದ ಕೆಡಿಟ್ ಏಷಿಯನ್ ರೆಸ್ಲಿಂಗ್ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ
    • 2012ರಲ್ಲಿ ಅಜರ್ ಬೈಜಾನ್ ಕೆಡಿಟ್ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ
    • ಹಿಮಾಚಲ ಪ್ರದೇಶದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಚಿನ್ನದ ಪದಕ
    • ಹರಿಯಾಣದಲ್ಲಿ 4ನೇ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ
    • ತಮಿಳುನಾಡಿನಲ್ಲಿ ನಡೆದ 9ನೇ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ
    • 3ನೇ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಚಿನ್ನದ ಪದಕ
    • 7ನೇ ಸೀನಿಯರ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ
    • ಹಳಿಯಾಳದಲ್ಲಿ ಏರ್ಪಾಟಾಗಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ
    • 2020ರಲ್ಲಿ ಧಾರವಾಡದಲ್ಲಿ ಆಯೋಜನೆಗೊಂಡಿದ್ದ ಕುಸ್ತಿ ಹಬ್ಬದಲ್ಲಿ ಚಿನ್ನದ ಪದಕ,
    • ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ 30ಕ್ಕೂ ಹೆಚ್ಚು ಚಿನ್ನದ ಪದಕಗಳು ಲಭಿಸಿವೆ.

    ಮಾತನಾಡೋ ಗೊಂಬೆಯ ಸಾಮಾಜಿಕ ಕಾಳಜಿ

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ‘ಡಿಂಕು’ , ‘ಅಜ್ಜಿ’ ಗೊಂಬೆ ಮೂಲಕ ಜಗತ್ತಿನ ಮೂಲೆಮೂಲೆಗಳಿಗೆ ಸಂಚರಿಸಿ ಕಲಾಪ್ರತಿಭೆ ಮೆರೆದ ‘ಧ್ವನಿ ಮಾಯಾ’ (ವೆಂಟ್ರಿಲೋಕ್ವಿಸಮ್ ಕಲಾವಿದೆ ಇಂದುಶ್ರೀ ರವೀಂದ್ರ ಯಾರಿಗೆ ತಾನೆ ಗೊತ್ತಿಲ್ಲ? ಮಕ್ಕಳಿಂದ ಮುದುಕರವರೆಗೂ ಇವರ ಪ್ರತಿಭೆ ಚಿರಪರಿಚಿತ.

    ಇಂದುಶ್ರೀ ಗೊಂಬೆಗಳೆಂದರೆ ಅದು ಸಾಮಾನ್ಯ ಗೊಂಬೆಗಳಲ್ಲ, ಜನರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುತ್ತವೆ. ಜತೆಗೆ ನಿತ್ಯ ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನೂ ಸೂಚಿಸುತ್ತವೆ, ಜನರಲ್ಲಿ ಜಾಗೃತಿ ಉಂಟು ಮಾಡುತ್ತವೆ. ಕರೊನಾ, ಏಡ್ಸ್, ವೈಯಕ್ತಿಕ ಶುಚಿತ್ವ, ಭ್ರೂಣ ಹತ್ಯೆ.. ಮತ್ತಿತರ ವಿಷಯಗಳಲ್ಲಿ ಆಂದೋಲನದ ರೂಪದಲ್ಲಿ ಇಂಧುಶ್ರೀ ಗೊಂಬೆಗಳು ಕೆಲಸ ಮಾಡಿವೆ.

    ಇಂದುಶ್ರೀ ರವೀಂದ್ರ ಪ್ರಯೋಗಶೀಲೆ. ಈಕೆ ಒಂದಲ್ಲ, ಎರಡಲ್ಲ, ಮೂರು/ನಾಲ್ಕು ಗೊಂಬೆಗಳ ಜತೆ ಏಕಕಾಲಕ್ಕೆ ಮಾತನಾಡುತ್ತಾರೆ. ಅವುಗಳಿಗೆ ಚಲನವಲನ ನೀಡುವ ಮೂಲಕ ಜೀವಂತಿಕೆ ತುಂಬುತ್ತಾರೆ. ಇವರು ಪಡೆದ ಪ್ರಶಸ್ತಿ- ಪುರಸ್ಕಾರಗಳು ಹತ್ತಾರು. ಹಲವಾರು ಪ್ರಥಮ ದಾಖಲೆಗಳನ್ನೂ ಮಾಡಿದ್ದಾರೆ! ಭಾರತದ ಪ್ರಪ್ರಥಮ ಧ್ವನಿ ಮಾಯಾ ಕಲಾವಿದೆಯಾದ ಅವರ ಸಾಧನೆಗಳು ಅನನ್ಯ. 2018ರಲ್ಲಿ ರಾಷ್ಟ್ರಪತಿಗಳ ಪ್ರಥಮ ಮಹಿಳಾ ಪ್ರಶಸ್ತಿ ಬಂದಿದೆ. ಅತಿ ಎತ್ತರದ ಮಾತನಾಡುವ (10 ಅಡಿ ಮಹಿಷಾಸುರ) ಗೊಂಬೆ ಲಿಮ್ಕಾ ರೆಕಾರ್ಡ್ ಸೇರಿದೆ. ಮೊದಲ ವೆಂಟ್ರಿಲೋಕ್ವಿಸ್ಟ್ ಆಗಿಯೂ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸೇರಿದ್ದಾರೆ. ಝೀ ಕನ್ನಡದಲ್ಲಿ 68 ವಾರ ಕಾರ್ಯಕ್ರಮ ನಡೆಸಿಕೊಟ್ಟಿರುವುದೂ ಲಿಮ್ಕಾ ರೆಕಾರ್ಡ್ ಆಗಿದೆ. ಮೂರ್ನಾಲ್ಕು ಗೊಂಬೆ ಚಲನವಲನ ಮಾಡಿದ್ದು ಕೂಡ ದಾಖಲೆಯಾಗಿದೆ.

    ದಾಖಲೆ ಸರಮಾಲೆ

    • ಕರ್ನಾಟಕದ ಮೊದಲ ಮಹಿಳಾ ಜಾದೂಗಾರ್ತಿ.
    • ಭಾರತದ ಮೊದಲ ಮಹಿಳಾ ವೆಂಟ್ರಿಲೋಕ್ವಿಸ್ಟ್.
    • ಪ್ರಪಂಚದಾದ್ಯಂತ 4000 ಕ್ಕೂ ಹೆಚ್ಚು ಪ್ರದರ್ಶನ.
    • ‘ಎಂಟರ್ಟೆನ್ಮೆಂಟ್ ಕೆ ಲಿಯೆ ಕುಚ್ ಭಿ ಕರೇಗಾ’ದ ಅಂತಿಮ ಸ್ಪರ್ಧೆಯಲ್ಲಿ ರನ್ನರ್​ಅಪ್.
    • ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್, ಹಾಲೆಂಡ್, ದುಬೈ, ಅಬು ದಾಬಿ, ಮಸ್ಕತ್, ಬಹರೇನ್, ಕತಾರ್, ಸಿಂಗಾಪೂರ, ಥೈಲ್ಯಾಂಡ್, ಹಾಂಗ್​ಕಾಂಗ್, ನ್ಯೂಜಿಲೆಂಡ್ ಮತ್ತಿತರ ದೇಶಗಳಲ್ಲಿ ಪ್ರದರ್ಶನ.
    • 5 ಲಿಮ್ಕಾ ಪುಸ್ತಕ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಳು
    • ನಿಜವಾದ ನಾಯಿಯೊಂದಿಗೆ ವೆಂಟ್ರಿಲೋಕ್ವಿಸಮ್ ವಿವಿಧ ಪ್ರಮುಖ ವಾಹಿನಿಗಳಲ್ಲಿ ಪ್ರದರ್ಶನ.

    ದೇವದಾಸಿಯರ ಕಷ್ಟಕ್ಕೆ ಮೋಕ್ಷ

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ದೇವದಾಸಿ ಪದ್ಧತಿ ನಿಮೂಲನೆಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಾಕಷ್ಟು ಪ್ರಯತ್ನಪಟ್ಟರೂ ಸಂಪೂರ್ಣ ನಿಮೂಲನೆ ಮಾಡಲಾಗಿಲ್ಲ. ಈ ನಡುವೆ, ರಾಯಚೂರು ಜಿಲ್ಲೆಯ ಮೋಕ್ಷಮ್ಮಮಸ್ಕಿ ಅವರು ಸಾವಿರಾರು ಮಹಿಳೆಯರನ್ನು ಈ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅವರಿಗೆ ಬದುಕು ಕಲ್ಪಿಸುವ ವಿಶಿಷ್ಟ ಕಾರ್ಯಗೈದಿದ್ದಾರೆ. ಈ ಅನಿಷ್ಟ ಪದ್ಧತಿ ತ್ಯಜಿಸುವಂತೆ ಮೋಕ್ಷಮ್ಮ ದೇವದಾಸಿಯರ ಮನವೊಲಿಸಲು ಮುಂದಾದಾಗ ಹಲವು ಸಂಕಷ್ಟ ಎದುರಿಸುವಂತಾಯಿತು. ದೇವದಾಸಿಯರೇ ಅವಮಾನಿಸಿ ಕಳುಹಿಸಿದರೂ ಎದೆಗುಂದದೆ ಅವರು ದೇವದಾಸಿಯರ ವಿಮೋಚನೆಗೆ ಹೋರಾಟ ಮುಂದುವರಿಸಿ ಯಶಸ್ಸು ಕಂಡಿದ್ದಾರೆ.

    ಬಡ ಕುಟುಂಬದಲ್ಲಿ ಹುಟ್ಟಿದ್ದ ಮೋಕ್ಷಮ್ಮ 10ನೇ ತರಗತಿವರೆಗೆ ಓದಿದ್ದಾರೆ. ನವಜೀವನ ಮಹಿಳಾ ಒಕ್ಕೂಟ ರಚಿಸಿ, ಜಿಲ್ಲೆಯಲ್ಲಿನ ದೇವದಾಸಿಯರನ್ನು ಗುರುತಿಸಿ, ಅವರನ್ನು ಈ ಅನಿಷ್ಟ ಪದ್ಧತಿಯಿಂದ ಹೊರತರುವ ಜತೆಗೆ ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹೋರಾಟದಿಂದಾಗಿ ದೇವದಾಸಿಯರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ 306 ಮನೆಗಳನ್ನು ಮಂಜೂರಾಗಿವೆ. ಸುಧಾಮೂರ್ತಿ ಅವರ ಇನ್ಪೋಸಿಸ್ ಫೌಂಡೇಷನ್ ಸಹಯೋಗದಲ್ಲಿ ದೇವದಾಸಿಯರಿಗೆ ತರಬೇತಿ ನೀಡಿ, ಸ್ವಾವಲಂಬಿಗಳಾಗಲು ನೆರವು ನೀಡಲಾಗಿದೆ. ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ 200ಕ್ಕೂ ಹೆಚ್ಚು ದೇವದಾಸಿಯರ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗಿದೆ. ಇದರಿಂದಾಗಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ಇಂಜಿನಿಯರ್, ಪಿಡಿಒ, ಪೊಲೀಸ್, ನರ್ಸ್ ಇತ್ಯಾದಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಪಾರ್ವತಮ್ಮ ರಾಜಕುಮಾರ ಅವರು ಮೈಸೂರಿನಲ್ಲಿ ಸ್ಥಾಪಿಸಿರುವ ಶಕ್ತಿಧಾಮದಲ್ಲಿ ಜಿಲ್ಲೆಯ 120 ದೇವದಾಸಿ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

    ವಿದೇಶದಲ್ಲೂ ಜಾಗೃತಿ: ಅಮೆರಿಕದಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ದೇವದಾಸಿ ಪದ್ಧತಿ ನಿಮೂಲನೆ ಕುರಿತು ಮೋಕ್ಷಮ್ಮ ವಿಷಯ ಮಂಡನೆ ಮಾಡಿದ್ದಾರೆ. ಸಿಕ್ಕಿಂ, ರಾಜಸ್ತಾನ, ಬಿಹಾರ, ಒರಿಸ್ಸಾ, ಜಾರ್ಖಂಡ್ ರಾಜ್ಯಗಳಲ್ಲಿಯೂ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ನಿಟ್ಟಿನಲ್ಲಿ ಲಿಂಗಸುಗೂರಿನಲ್ಲಿ ಸ್ವಾಭಿಮಾನಿ ಜನಪರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸ್ಥಾಪಿಸಿ, ಅದರ ಮೂಲಕ ಆರು ಕೋಟಿ ರೂ. ಉಳಿತಾಯ ಮಾಡಿದ್ದು, ಸಿಂಧನೂರು, ರಾಯಚೂರು, ಮಾನ್ವಿಯಲ್ಲಿ ಶಾಖೆಗಳನ್ನು ಆರಂಭಿಸಿದ್ದಾರೆ.

    ಪರಿಸರ ಹೋರಾಟಗಾರ್ತಿಯಾದ ಮೊದಲ ಮಹಿಳಾ ಇಂಜಿನಿಯರ್

    ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ಪರಿಸರ ಹೋರಾಟಗಾರ್ತಿಯಾಗಿ 87 ವರ್ಷ ವಯಸ್ಸಿನ ಅಲ್ಮಿತ್ರಾ ಪಟೇಲ್ ಚಿರಪರಿಚಿತ. ಮುಂಬೈನಲ್ಲಿ ತಂದೆ ವರ್ತಕರಾಗಿದ್ದರು; ತಾಯಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದು ಅಲ್ಮಿತ್ರಾ ಪಟೇಲರ ಮೇಲೆ ಸಹಜವಾಗಿಯೇ ಪ್ರಭಾವ ಬೀರಿತು. ಪ್ರೌಢಶಾಲೆ ದಿನಗಳಲ್ಲಿ ವಿಜ್ಞಾನ ಕಲಿಕೆಯ ಪ್ರಭಾವಳಿಯಿತ್ತು. ಆದರೆ, ತಂದೆಯ ಅಪೇಕ್ಷೆಯಂತೆ ಅಮೆರಿಕದ ಮೆಸಾಚುಸೆಟ್ಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್ಸಿ ಜನರಲ್ ಇಂಜಿನಿಯರಿಂಗ್, ಸಿರಾಮಿಕ್ಸ್ನಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರ್ಣಗೊಳಿಸಿದರು. 1959ರಲ್ಲಿ ಇಂಜಿನಿಯರಿಂಗ್ ಪದವೀಧರೆಯಾದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ನಂತರ ಮೂರು ದಶಕಗಳ ಕಾಲ ಸಿಮೆಂಟ್ ಅಂಚುಗಳ ತಯಾರಿಕೆ ಸಂಬಂಧಿತ ಉದ್ಯಮದಲ್ಲಿ ಕೆಲಸ ಮಾಡಿದರು.

    ಪ್ರಸ್ತುತ ಘನತ್ಯಾಜ್ಯ ನಿರ್ವಹಣೆ ವಿಷಯಗಳಲ್ಲಿ ಚಿಂತಕರು ಹಾಗೂ ಸರ್ಕಾರದ ಸಮಿತಿಗಳಲ್ಲಿ ಅಲ್ಮಿತ್ರಾ ಪಟೇಲ್ ಸಕ್ರಿಯರಾಗಿದ್ದಾರೆ. 1970ರ ದಶಕದಲ್ಲಿ ಪರಿಸರ, ಘನತ್ಯಾಜ್ಯ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಧುಮುಕಿದ ಅವರು, ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ವಣ, ಅಲಸೂರು ಕೆರೆ ರಕ್ಷಣೆ ಮುಂತಾದ ಚಟುವಟಿಕೆಗಳಲ್ಲಿ ಹಾಗೂ ಪರಿಸರ ನೀತಿ ನಿರೂಪಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.

    ಘನತ್ಯಾಜ್ಯ ನಿರ್ವಹಣೆಗಾಗಿ 1991ರಲ್ಲಿ ಪರಿಹಾರ ಮಾಗೋಪಾಯಗಳನ್ನು ಸೂಚಿಸಿದರು. 1994-95ರಲ್ಲಿ ದೇಶದ 80 ನಗರ- ಪಟ್ಟಣಗಳಲ್ಲಿ ಸಂಚರಿಸಿದ ಅವರು, ಅಲ್ಲಿನ ಹೊರ ವಲಯದ ಬಯಲು ಜಾಗ ಹಾಗೂ ಕೂಡು ರಸ್ತೆಗಳಲ್ಲಿ ಘನತ್ಯಾಜ್ಯ ಸುರಿದಿದ್ದನ್ನು ಪತ್ತೆ ಹಚ್ಚಿ, ಅಡ್ಡ ಪರಿಣಾಮದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದರು. ಬಯಲು ಜಾಗೆಯಲ್ಲಿ ಘನತ್ಯಾಜ್ಯ ಸುರಿಯುವುದನ್ನು ಬಲವಾಗಿ ವಿರೋಧಿಸಿದ ಅಲ್ಮಿತ್ರಾ ಪಟೇಲ್, ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು.

    ಸುಪ್ರೀಂ ಕೋರ್ಟ್ ಈ ಪಿಐಎಲ್ ವಿಚಾರಣೆ ನಡೆಸಿ 1996ರಲ್ಲಿ ನೀಡಿದ ತೀರ್ಪು ಒಂದು ಮೈಲಿಗಲ್ಲಾಗಿದೆ; ನಗರ- ಪಟ್ಟಣ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ದಿಕ್ಸೂಚಿಯಾಗಿದೆ. ಅಲ್ಲದೆ, ಅಲ್ಮಿತ್ರಾ ಅವರು, ಘಾಜಿಪುರ ಭೂಭರ್ತಿ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿದ್ದು, ಪರಿಸರ ಕಾಳಜಿ ಮಾತ್ರವಲ್ಲದೆ ಮಾನವೀಯ ಸಂವೇದನೆಯ ಉದಾಹರಣೆಯಾಗಿದೆ. ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ಅವರದು ದಣಿವರಿಯದ ಹಾಗೂ ಮೇಲ್ಪಂಕ್ತಿಯ ಕಾರ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts