More

    ನಾಳೆ ದ್ವಿತೀಯ ಪಿಯು ಪರೀಕ್ಷೆ ಆರಂಭ; 35 ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ಧತೆ

     ತುಮಕೂರು: ಪ್ರಸಕ್ತ ದ್ವಿತೀಯ ಪಿಯುಸಿ ಪರೀಕ್ಷೆ ಮಾ.9ರಿಂದ 29ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 27857 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 12889 ಬಾಲಕರು ಹಾಗೂ 14968 ಬಾಲಕಿಯರು ಸೇರಿ ಒಟ್ಟು 27857 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 24386 (10932 + 13454) ಹೊಸ ವಿದ್ಯಾರ್ಥಿಗಳು, 2925 (1718 + 1207) ಪುನರಾವರ್ತಿತ, 546 (239 + 307) ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
    ವಿಜ್ಞಾನ ವಿಭಾಗದಲ್ಲಿ 3578 ವಿದ್ಯಾರ್ಥಿಗಳು ಹಾಗೂ 5120 ವಿದ್ಯಾರ್ಥಿನಿಯರು ಸೇರಿ 8698, ವಾಣಿಜ್ಯ ವಿಭಾಗದಲ್ಲಿ 4008 ವಿದ್ಯಾರ್ಥಿಗಳು ಹಾಗೂ 5452 ವಿದ್ಯಾರ್ಥಿನಿಯರು ಸೇರಿ 9460, ಕಲಾ ವಿಭಾಗದಲ್ಲಿ 3346 ವಿದ್ಯಾರ್ಥಿಗಳು ಹಾಗೂ 2882 ವಿದ್ಯಾರ್ಥಿನಿಯರು ಸೇರಿ ಒಟ್ಟು 6228 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

    35 ಪರೀಕ್ಷಾ ಕೇಂದ್ರ: ಜಿಲ್ಲೆಯಲ್ಲಿ 35 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ಕಲ್ಪಿಸಲಾಗಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಸಮಯ ಇದ್ದು ವಿದ್ಯಾರ್ಥಿಗಳು ಬೆಳಗ್ಗೆ 9ಕ್ಕೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿದ್ದು, ರಿಜಿಸ್ಟರ್ ಸಂಖ್ಯೆಯನ್ನು ಪತ್ತೆ ಹಚ್ಚಿ ಯಾವುದೇ ಗೊಂದಲಗಳಿಗೆ, ವದಂತಿಗಳಿಗೆ ಕಿವಿಗೊಡದಂತೆ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

    ತುಮಕೂರು ಜಿಲ್ಲಾ ಖಜಾನೆಯಿಂದ ತುಮಕೂರು, ತುರುವೇಕೆರೆ,ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಕುಣಿಗಲ್ ತಾಲೂಕುಗಳ ವ್ಯಾಪ್ತಿಯಲ್ಲಿನ 25 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ರವಾನೆ ಆಗಲಿವೆ. ಅದೇರೀತಿ ಮಧುಗಿರಿ ಉಪ ಖಜಾನೆಯಿಂದ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲೂಕು ವ್ಯಾಪ್ತಿಯ 10 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ರವಾನೆ ಆಗಲಿವೆ.

    200 ಮೀ., ಸುತ್ತಮುತ್ತ ನಿಷೇಧಾಜ್ಞೆ: ಸಾಕಷ್ಟು ಗಾಳಿ, ಬೆಳಕು ಇರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮವಹಿಸಿದೆ. ಇದರ ಜತೆಗೆ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೌಲಭ್ಯ ಸಹ ಇರಲಿದೆ. ಇನ್ನೂ ಪರೀಕ್ಷಾ ದಿನಗಳಂದು ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗುವುದು. ನಿರ್ಬಂಧಿತ ಪ್ರದೇಶಗಳಿಗೆ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡದಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ.

    ಜಿಪಿಎಸ್ ಅಳವಡಿಕೆ: ಪ್ರಥಮ ವರ್ಷದ ಪಿಯು ವಾರ್ಷಿಕ ಪರೀಕ್ಷೆ ಸೋರಿಕೆ ಬೆನ್ನಲ್ಲೇ ಜಿಲ್ಲಾಡಳಿತ ದ್ವಿತೀಯ ಪಿಯು ಪರೀಕ್ಷೆ ಸುಸೂತ್ರವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶ ಕೊಡದಂತೆ ನಡೆಸಲು ಸಜ್ಜಾಗಿದೆ. ಹಾಗಾಗಿ, ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದೆ. ಜಿಲ್ಲಾ ಖಜಾನೆ ಹಾಗೂ ಮಧುಗಿರಿ ಉಪ ಖಜಾನೆಯಿಂದ ಪರೀಕ್ಷಾ ದಿನಗಳಂದು ಪ್ರಶ್ನೆ ಪತ್ರಿಕೆಯನ್ನು ಪೊಲೀಸ್ ಭದ್ರತೆಯೊಮದಿಗೆ ರವಾನಿಸಲು ಕ್ರಮವಹಿಸಲಾಗಿದೆ.

    ಮೊದಲದಿನ ಕನ್ನಡ, ಅರೇಬಿಕ್: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮೊದಲ ದಿನ ಮಾ.9ರಂದು ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಇನ್ನುಳಿದಂತೆ ಮಾ.11ರಂದು ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ; ಮಾ.13ರಂದು ಅರ್ಥಶಾಸ್ತ್ರ; ಮಾ.14ರಂದು ರಸಾಯನಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ಮೂಲಗಣಿತ; ಮಾ.15ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾ.16ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾ.17ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್, ಮಾ.18ರಂದು ಜೀವಶಾಸ್ತ್ರ, ಭೂಗೋಳ ಶಾಸ್ತ್ರ, ಮಾ.20ರಂದು ಭೌತಶಾಸ್ತ್ರ, ಇತಿಹಾಸ, ಮಾ.21ರಂದು ಹಿಂದಿ; ಮಾ.23ರಂದು ಇಂಗ್ಲೀಷ್, ಮಾ.25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ.27ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹವಿಜ್ಞಾನ, ಮಾ.29ರಂದು ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ ಹಾಗೂ ಗಣಕ ವಿಜ್ಞಾನ ಪರೀಕ್ಷೆ ನಡೆಯಲಿದೆ.

    ಉಚಿತ ಉಪಹಾರ: ದ್ವಿತೀಯ ಪಿಯು ಪರೀಕ್ಷೆ ಬರೆಯಲು ಗ್ರಾಮೀಣಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ನಗರ ಸರ್ಕಾರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಪರೀಕ್ಷೆ ನಡೆಯುವ ದಿನಗಳಂದು ಬೆಳಗ್ಗೆ 9 ರಿಂದ 9.45ರವರೆಗೆ ಉಚಿತ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್) ಮನವಿ ಮೇರೆಗೆ ನಿಸರ್ಗ ಹೋಟೆಲ್‌ನ ನಿಸರ್ಗ ರಮೇಶ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts