

ಹೆಬ್ರಿ: ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸಂಜೀವಿನಿ ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ, ರಾಜ್ಯದಲ್ಲಿ ಶೇ.30 ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಒಕ್ಕೂಟಗಳಲ್ಲಿ ಸದೃಢರಾಗಿದ್ದಾರೆ ಎಂದು ಉಡುಪಿ ಜಿಪಂ ಉಪ ಕಾರ್ಯದರ್ಶಿ ಶ್ರೀ ನಿವಾಸ ರಾವ್ ಕರೆ ನೀಡಿದರು.
ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಪಂ ಉಡುಪಿ, ಹೆಬ್ರಿ ತಾಪಂ, ಗ್ರಾಪಂ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಹೆಬ್ರಿ ಆಶ್ರಯದಲ್ಲಿ ಜಿಲ್ಲಾಮಟ್ಟದ ಸಂಜೀವಿನಿ ಮಾರಾಟ ಮೇಳದಲ್ಲಿ ಹೆಬ್ರಿ ಉತ್ಸವ ಪ್ರಯುಕ್ತ ಹಮ್ಮಿಕೊಂಡ ಜಿಲ್ಲಾಮಟ್ಟದ ಸಂಜೀವಿನಿ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಬ್ರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ.ಮಾತನಾಡಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಪೊಲೀಸ್ ಠಾಣೆ ಠಾಣಾಧಿಕಾರಿ ಮಹೇಶ್ ಟಿ.ಎಂ., ಕೆನರಾ ಬ್ಯಾಂಕ್ ಜಿಲ್ಲಾ ಮುಖ್ಯ ಪ್ರಬಂಧಕ ಹರೀಶ್ ಜಿ., ಬ್ರಹ್ಮಾವರ ರುಡ್‌ಸೆಟ್ ನಿರ್ದೇಶಕ ಲಕ್ಷ್ಮೀಶ್, ಕಾಪು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿಸಿಲ್ವ, ಹೆಬ್ರಿ ಪಿಡಿಒ ಸದಾಶಿವ ಸೇರ್ವೆಗಾರ್ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟ ಸದಸ್ಯೆ ಸಾಧಕಿ ಸುಗಂಧಿ ನಾಯ್ಕ ಶಿವಪುರ ಅವರನ್ನು ಸನ್ಮಾನಿಸಲಾಯಿತು. ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕುಮಟ್ಟದ ಒಕ್ಕೂಟ ಅಧ್ಯಕ್ಷೆ ಸುಜಾತಾ ಎಸ್.ಕುಮಾರ್ ಸ್ವಾಗತಿಸಿದರು. ವಿವಿಧ ಗ್ರಾಪಂಗಳ ಒಟ್ಟು 22 ಮಳಿಗೆಗಳು ಪಾಲ್ಗೊಂಡಿದವು.