

ಉಡುಪಿ: ಮಾತೃ ಭಾಷೆ ಕೊಂಕಣಿಯ ಮೇಲೆ ಮಮತೆ ಮತ್ತು ಪ್ರೀತಿಯನ್ನು ಇರಿಸಿಕೊಳ್ಳಬೇಕು. ಪ್ರತಿನಿತ್ಯ ಮನೆಗಳಲ್ಲಿ ಕಡ್ಡಾಯವಾಗಿ ಮಾತನಾಡಬೇಕು. ಈ ಮೂಲಕ ಭಾಷಾ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಅಂಬಾಗಿಲು ಬಳಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ 11 ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದಿಂದ ಇತರ ಭಾಷೆೆಗಳಿಗೆ ಅವಲಂಬಿತರಾಗಬೇಕಾಗಿದೆ. ಹೀಗಾಗಿ ಮನೆಗಳಲ್ಲಿ ಕೊಂಕಣಿ ಭಾಷೆ ಉಪಯೋಗದಿಂದ ಮಾತೃಭಾಷೆ ಜೀವಂತವಾಗಿರಲು ಸಾಧ್ಯವಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ ವಲೇರಿಯನ್ ಕ್ವಾಡ್ರಸ್ ಅಜೆಕಾರ್ ಮಾತನಾಡಿ, ಕೊಂಕಣಿ ಸಾಹಿತಿಗಳು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರುವ ಕೆಲಸವನ್ನು ಸಮುದಾಯ ಮಾಡಿಕೊಂಡು ಬಂದಿದೆ. ಈ ಮೂಲಕ ಕೊಂಕಣಿ ಸಾಹಿತಿಗಳು ಮುಂದೆಯೂ ಒಗ್ಗಟ್ಟಿನಿಂದ ಸಾಹಿತ್ಯದ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಉಜ್ವಾಡ್ ಪತ್ರಿಕೆಯ ಸಂಪಾದಕ ಆಲ್ವಿನ್ ಸೆರಾವೊ ಅವರ ಜೆರಿಕೊಚೊ ಪಾಗೊರ್ ಹಾಗೂ ಯುವ ಸಾಹಿತಿ ಅನ್ಸಿಟಾ ಡಿಸೋಜಾ ಇವರ ತಾಳೊ ಪುಸ್ತಕಗಳನ್ನು ಧಮಾರ್ಧ್ಯಕ್ಷರು ಲೋಕಾರ್ಪಣೆಗೊಳಿಸಿದರು. ಉಜ್ವಾಡ್ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳು ಹಾಗೂ ಕ್ವಿಜ್ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗೌರವಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ದಾಯ್ಜಿ ದುಬಾಯ್ ಸಂಘಟನೆಯ ಮಂಗಳೂರು ಸಂಚಾಲಕ ಪ್ರವಿಣ್ ತಾವ್ರೊ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ಉಜ್ವಾಡ್ ಪತ್ರಿಕೆಯ ಸಂಪಾದಕ ಆಲ್ವಿನ್ ಸೆರಾವೊ ವಂದಿಸಿದರು. ಡಾ. ವಿನ್ಸೆಂಟ್ ಆಳ್ವಾ ಕಾರ್ಯಕ್ರಮ ನಿರೂಪಿಸಿದರು.