ತಾಯಿಯ ಪಕ್ಕ ಮಲಗಿದ್ದ 42 ದಿನಗಳ ನವಜಾತ ಶಿಶು ಅಪಹರಣ; ಮನೆಗೇ ನುಗ್ಗಿ ಕದ್ದೊಯ್ದಿದ್ದ ಮಹಿಳೆ

Police with child
ಮಗುವನ್ನು ಪತ್ತೆ ಮಾಡಿ ರಕ್ಷಿಸಿದ ಪೊಲೀಸರು
Published on

ಬೆಂಗಳೂರು: ಮನೆಗೆ ನುಗ್ಗಿದ್ದಲ್ಲದೆ ತಾಯಿಯ ಪಕ್ಕದಲ್ಲೇ ಮಲಗಿದ್ದ 42 ದಿನಗಳ ನವಜಾತ ಶಿಶುವನ್ನು ಮಹಿಳೆಯೊಬ್ಬಳು ಅಪಹರಣ ಮಾಡಿದ್ದಾಳೆ. ಕಾರ್ಯಾಚರಣೆಗಿಳಿದ ಪೊಲೀಸರು ಆಮಹಿಳೆಯನ್ನು ಬಂಧಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮುಳಬಾಗಿಲು ಮೂಲದ, ಶಿವಾಜಿನಗರ ನಿವಾಸಿ ನಂದಿನಿ ಅಲಿಯಾಸ್ ಆಯೆಷಾ ಬಂಧಿತ ಮಹಿಳೆ. ಈಕೆ ಅಪಹರಣ ಮಾಡಿದ್ದ ನವಜಾತ ಶಿಶುವನ್ನು ರಕ್ಷಣೆ ಮಾಡಿ ಪಾಲಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಲಾಸಿಪಾಳ್ಯದ ದುರ್ಗಮ್ಮ ಟೆಂಪಲ್ ರಸ್ತೆ ಶಂಭುಪಾಳ್ಯ ನಿವಾಸಿ ಫಾರಿನ್ ಬೇಗಂ (27) ಎಂಬಾಕೆ ಶನಿವಾರ ಬೆಳಗ್ಗೆ 7.30ರಲ್ಲಿ ಮನೆಯಲ್ಲಿ ತನ್ನ ನವಜಾತ ಶಿಶುವಿಗೆ ಹಾಲು ಕುಡಿಸಿ ಪಕ್ಕದಲ್ಲಿ ಮಲಗಿಸಿಕೊಂಡು ತಾನೂ ಮಲಗಿದ್ದರು. ಮನೆಗೆ ಡೋರ್ ಲಾಕ್ ಆಗಿರಲಿಲ್ಲ.

ಈ ವೇಳೆ ಅಪರಿಚಿತ ಮಹಿಳೆ ಮನೆಗೆ ನುಗ್ಗಿ ಮಗು ಮತ್ತು ಮೊಬೈಲ್ ಫೋನ್​ ಎತ್ತಿಕೊಂಡು ಪರಾರಿ ಆಗಿದ್ದಳು. ತಾಯಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಆರೋಪಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಳು. ದಿಕ್ಕು ತೋಚದ ಫಾರಿನ್ ಬೇಗಂ ಕಲಾಸಿಪಾಳ್ಯ ಠಾಣೆಗೆ ದೂರು ಸಲ್ಲಿಸಿದ್ದರು.

ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮತ್ತೊಂದೆಡೆ ಮಧ್ಯಾಹ್ನ 12 ಗಂಟೆಯಲ್ಲಿ ಮಾಗಡಿ ರಸ್ತೆ ರೈಲ್ವೇ ಕ್ವಾಟ್ರಸ್ ಬಳಿ ನವಜಾತ ಶಿಶುವನ್ನು ಎತ್ತಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯನ್ನು ಕಂಡ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆ ಮತ್ತು ಮಗುವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಲಾಸಿಪಾಳ್ಯದಲ್ಲಿ ಅಪಹರಿಸಲಾಗಿದ್ದ ಮಗು ಎಂಬುದು ಗೊತ್ತಾಗಿದೆ. ಮಹಿಳೆಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪಾಲಕರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net