

ನವದೆಹಲಿ: ಇತ್ತೀಚೆಗಷ್ಟೇ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಿದ್ದು, ಇದೀಗ ಕೇಂದ್ರ ಸರ್ಕಾರಿ ನೌಕರರಿಗೂ ಸಿಹಿ ಸುದ್ದಿ ಹೊರಬಿದ್ದಿದೆ. ಅರ್ಥಾತ್, ಕೇಂದ್ರ ಸರ್ಕಾರಿ ನೌಕರರಿಗೆ ಶೇ. 4 ತುಟ್ಟಿಭತ್ಯೆ ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದ್ದು, ಶೇ. 4 ತುಟ್ಟಿಭತ್ಯೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮೂಲವೇತನ/ಪಿಂಚಣಿಯ ಶೇ.42ಕ್ಕೆ ತಲುಪಿದೆ.
2023ರ ಜ. 1ಕ್ಕೇ ಅನ್ವಯಿಸುವಂತೆ ಈ ಹೆಚ್ಚಳವನ್ನು ಮಾಡಲಾಗಿದ್ದು, ಇದರಿಂದ ಕೇಂದ್ರ ಸರ್ಕಾರದ 47.58 ಲಕ್ಷ ಉದ್ಯೋಗಿಗಳಿಗೆ ಹಾಗೂ 69.76 ಲಕ್ಷ ನಿವೃತ್ತ ನೌಕರರಿಗೆ ಪ್ರಯೋಜನವಾಗಲಿದೆ. ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಮೇರೆಗೆ ಈ ಹೆಚ್ಚಳವನ್ನು ಮಾಡಲಾಗಿದೆ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ತಿಳಿಸಿದೆ.