

ಚಿಂತಾಮಣಿ: ಗುರುಕೃಪೆಯಿಲ್ಲದೆ ತತ್ವಜ್ಞಾನ ಲಭಿಸುವುದಿಲ್ಲ. ಮಾನವನಿಗೆ ಈ ಪ್ರಪಂಚದ ಭೋಗಗಳು ಶಾಶ್ವತವಲ್ಲ. ಸುಖದಂತೆ ಕಂಡು ಬರುವ ಯಾವ ಅನುಭವವೂ ಸತ್ಯವಲ್ಲ. ಪರಮಾತ್ಮನೊಬ್ಬನೇ ನಿತ್ಯಸತ್ಯನು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಬೋಧಿಸಿದರು.
ತಾಲೂಕಿನ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದಲ್ಲಿ ಬೆಂಗಳೂರಿನ ಋಷಿ ಪ್ರಭಾಕರ್ ವಿದ್ಯಾ ಕೇಂದ್ರದಿಂದ ಹಮ್ಮಿಕೊಂಡಿದ್ದ ಹೃದಯ ಸಮ್ಮೇಳನದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅವರು, ಸದ್ಗುರುಗಳು ಸದಾಕಾಲ ಸಾಧಕ ಶಿಷ್ಯನನ್ನು ಉದ್ಧರಿಸುವ ಚಿಂತನೆಯನ್ನು ಮಾಡುತ್ತಿರುತ್ತಾರೆ. ಉಪದೇಶ ಮಾಡುವಾಗ ಮೋಕ್ಷಸಾಧನೆಯ ತತ್ವವನ್ನೇ ಸೂಕ್ಷ್ಮವಾಗಿ, ಸ್ಥೂಲವಾಗಿ ತಿಳಿಸುತ್ತಿರುತ್ತಾರೆ. ರಾಗದ್ವೇಷಗಳಿಲ್ಲದೆ ಎಲ್ಲವನ್ನೂ ಸಮಭಾವನೆಯಿಂದ ಕಾಣುತ್ತ ಪ್ರಪಂಚದಲ್ಲಿ ಸಿಕ್ಕಿಯೂ ಸಿಕ್ಕದಂತೆ ಬಾಳುತ್ತ ಆತ್ಮಾನುಸಂಧಾನ ಮಾಡುವುದೇ ಯೋಗ. ಈ ಹಿನ್ನಲೆಯಲ್ಲಿ ಕೈವಾರದ ಶ್ರೀಯೋಗಿನಾರೇಯಣ ತಾತಯ್ಯನವರು ಹಲವು ಬಾರಿ ಗುರು ಉಪದೇಶದ ಮಾರ್ಗದರ್ಶನವನ್ನು ಶಿಷ್ಯನಿಗೆ ಮಾಡಿದ್ದಾರೆ. ಈ ಎಲ್ಲ ಉಪದೇಶಗಳ ಮೂಲ ಉದ್ದೇಶ ಮನಸ್ಸನ್ನು ಸ್ಥಿರಗೊಳಿಸುತ್ತಾ, ಭಗವಂತನ ಕಡೆಗೆ ತಿರುಗಿಸುವುದೇ ಆಗಿದೆ. ಭಜನೆಯಿಂದ ಮನಸ್ಸಿನ ಪರಿವರ್ತನೆಯಾಗುತ್ತದೆ. ಕೆಸರಿನಲ್ಲಿದ್ದರೂ ಕಮಲದ ಹೂವು ಹೇಗೆ ಶುದ್ಧವಾಗಿರುವುದೋ, ಹಾಗೇ ಮಾನವರು ಪ್ರಪಂಚದಲ್ಲಿದ್ದರೂ ಅಂತರಂಗದಲ್ಲಿ ಶುದ್ಧವಾಗಿರಬೇಕು ಎಂದರು. ಕೈವಾರ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ. ಸತ್ಯನಾರಾಯಣ್, ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಋಷಿ ಪ್ರಭಾಕರ್ ವಿದ್ಯಾಕೇಂದ್ರದ ಟ್ರಸ್ಟಿ ಎನ್.ಗೋಪಾಲನ್, ಕಾರ್ಯದರ್ಶಿ ನಾಗಭೂಷಣ್, ಕರ್ನಾಟಕ ವಿಭಾಗೀಯ ಸಂಚಾಲಕರಾದ ಪ್ರಕಾಶ್‌ಜೀ, ಆಪ್ತ ಸಲಹೆಗಾರ ಮಹೇಶ್, ವಿಭಾಗೀಯ ಸಂಯೋಜಕ ಸಿ.ಎಂ.ವೆಂಕಟೇಶ್ ಇದ್ದರು. ವೇದಿಕೆಯಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ ನೆರವೇರಿಸಲಾಯಿತು. ವಿಶ್ವ ಹೃದಯ ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ಯೋಗ, ಧ್ಯಾನ, ಭಜನೆ ಹಾಗೂ ವಿವಿಧ ಆಧ್ಯಾತ್ಮಿಕ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬದುಕಿಗೆ ದಾರಿದೀಪ
ಋಷಿ ಪ್ರಭಾಕರ್ ವಿದ್ಯಾ ಕೇಂದ್ರದ ಚೈತನ್ಯ ಕಾಯ್ಕಿಣಿ ಗುರೂಜೀ ಮಾತನಾಡಿ, ಮಹಾಪುರುಷರ ಸಾನ್ನಿಧ್ಯ ಮತ್ತು ಸಾಮೀಪ್ಯದಿಂದ ಮನುಷ್ಯತ್ವ ಹಾಗೂ ಮುಮುಕ್ಷತ್ವವನ್ನು ಕಂಡುಕೊಳ್ಳಬಹುದು. ಸಂತರ ನುಡಿಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಪ್ರತಿನಿತ್ಯ ಗುರುಗಳ ಧ್ಯಾನ ಮಾಡಬೇಕು. ಬದುಕನ್ನು ಸರಳವಾಗಿಸಿಕೊಂಡು ಜೀವನದ ಮರ್ಮವನ್ನು ಅರಿಯಬೇಕು ಎಂದರು.