ಈಶ ಗ್ರಾಮೋತ್ಸವದಿಂದ ಉತ್ಸಾಹ

WEB 1
Published on

ಈಶ ಪೌಂಡೇಷನ್‌ನ ಸದ್ಗುರು ಸಂತಸ 10 ತಿಂಗಳ ಬಳಿಕ ಆದಿಯೋಗಿ ಕ್ಷೇತ್ರಕ್ಕೆ

ಚಿಕ್ಕಬಳ್ಳಾಪುರ: ಈಶ ಗ್ರಾಮೋತ್ಸವ ಜನರಲ್ಲಿ ಹೊಸ ಉತ್ಸಾಹ ತುಂಬುವ ಜತೆಗೆ ಅನೇಕರಲ್ಲಿ ಮದ್ಯಪಾನ ಮತ್ತು ಜಾತಿ ಭೇದ-ಭಾವವನ್ನೂ ದೂರವಾಗಿಸಿದೆ ಎಂದು ಸದ್ಗುರು ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ಹನುಮಂತಪುರ ಸಮೀಪದ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಆಯೋಜಿಸಿದ್ದ ಈಶ ಗ್ರಾಮೋತ್ಸವದಲ್ಲಿ 5 ರಾಜ್ಯಗಳಿಂದ 43 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಇದು ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ರಮ ದೇಶದಾದ್ಯಂತ ಕೈಗೊಳ್ಳಲು ಚಿಂತಿಸಲಾಗಿದೆ ಎಂದರು.

ಸದ್ಗುರು ಹೇಳಿದ ಜಾತಿ ಕ್ಯಾತೆ ಕಥೆ: ಗ್ರಾಮೀಣ ಭಾಗದಲ್ಲಿನ ಜಾತಿ ಪೆಡಂಭೂತ, ದೇಶ-ವಿದೇಶಗಳಲ್ಲಿ ಸಾಮಾನ್ಯ ಜನರಿಗೆ ಬಾಧಿಸುತ್ತಿರುವ ವಿದ್ಯಮಾನಗಳ ಬಗ್ಗೆ ಸದ್ಗುರು ವಿವರಿಸಿದರು. ಹಿಂದೆ ತಮಿಳುನಾಡಿನಲ್ಲಿ ಗ್ರಾಮೋತ್ಸವ ಕಾರ್ಯಕ್ರಮದಡಿ ಕ್ರೀಡಾ ಚಟುವಟಿಕೆ ಮತ್ತು ಉಪನ್ಯಾಸ ಪ್ರಾರಂಭದ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಅವರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಆದರೆ, ಮಾರನೇ ದಿನ ಆಗಮಿಸಿದ ಜನರ ಪ್ರಮಾಣ ಕುಸಿದಿತ್ತು. ಇದಕ್ಕೆ ತಳ ಸಮುದಾಯದವರ ಜತೆ ಊಟ ಮಾಡಬಾರದು ಎಂಬ ಕ್ಯಾತೆ ಕಾರಣವಾಗಿತ್ತು. ಆಟಕ್ಕೆ ಇಲ್ಲದ ಜಾತಿ ಊಟಕ್ಕೆ ಕಾಡಿತು. ಇದಕ್ಕೆ ಕೆಲ ದಿನ ಭೋಜನ ವ್ಯವಸ್ಥೆ ಇಲ್ಲದೇ ನಡೆದ ಕ್ರೀಡಾ ಚಟುವಟಿಕೆಯಲ್ಲಿ ಗೆಲುವಿಗೆ ಪೈಪೋಟಿಯಲ್ಲಿ ಒಂದಾಗಿ ಆಡಿದ ಜನರು ಜಾತಿಯನ್ನು ಮರೆತರು ಎಂದು ಸದ್ಗುರು ತಿಳಿಸಿದರು.

ಭಗವಾನ್ ಕೃಷ್ಣ, ಬುದ್ಧ ಸೇರಿ ಅನೇಕರು ಬಂದು, ಉತ್ತಮ ಜೀವನ ನಡೆಸುವ ವಿಚಾರದಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಇಷ್ಟಾದ ಮೇಲೂ ಜನರು ಬದಲಾಗಬೇಕಿತ್ತು. ಆದರೆ, ಈಗಲೂ ಎಲ್ಲದರಲ್ಲೂ ಒತ್ತಡಕ್ಕೆ ಬೀಳುತ್ತಿದ್ದಾರೆ. ಇದರ ಬಗ್ಗೆ ವಿದೇಶಗಳಲ್ಲಿ ಹೆಚ್ಚಿನ ಸಲಹೆ ಕೇಳಲಾಗುತ್ತದೆ. ಅಸಲಿಗೆ ಒತ್ತಡವು ಬೀಳುತ್ತಿಲ್ಲ. ಅನವಶ್ಯಕ ಚಿಂತೆ ಕಾಡುತ್ತಿದೆ ಎಂದರು.

ಅಭಿಯಾನಕ್ಕೆ ಸರ್ಕಾರ, ದಾನಿಗಳ ನೆರವಿರಲಿ

ದೇಶಾದ್ಯಂತ ರೈತರ ಆದಾಯ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಈಶ ಗ್ರಾಮ ಫಾರ್ಮಾ ಅಭಿಯಾನವನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ, ದಾನಿಗಳ ನೆರವು ಅಗತ್ಯವಿದೆ ಎಂದು ಸದ್ಗುರು ತಿಳಿಸಿದರು. ಕರ್ನಾಟಕದಲ್ಲಿ ರೈತರ ಆದಾಯ ಹೆಚ್ಚಳ ಮತ್ತು ಕೃಷಿ ಅನುಕೂಲಕ್ಕಾಗಿ ಈಶ ಗ್ರಾಮ ಪಾರ್ಮಾ 6 ಕೇಂದ್ರಗಳು (ಇನ್‌ಪುಟ್ ಶಾಪ್ಸ್) ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಯಾವುದೇ ಡೀಲರ್, ಮಧ್ಯವರ್ತಿ ಇಲ್ಲ. ಮಣ್ಣಿನ ಫಲವತ್ತತೆ ಹೆಚ್ಚಳ, ಸಾವಯವ ಗೊಬ್ಬರ, ಕೃಷಿ ಪರಿಕರಗಳ ವಿತರಣೆಯ ಮೂಲಕ ರೈತರಿಗೆ ಶೇ.300 ಹೆಚ್ಚುವರಿ ಆದಾಯ ಸಿಗುವಂತೆ ಮಾಡುವ ನಿಟ್ಟಿನಲ್ಲಿ ದೇಶದಾದ್ಯಂತ ಅಭಿಯಾನ ನಡೆಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ತಿಳಿಸಿದರು.

ಮಿರಾಕಲ್ ಮೈಂಡ್ ಆ್ಯಪ್ ಬಿಡುಗಡೆ

ಮುಂಬರುವ ಮಾರ್ಚ್‌ನಲ್ಲಿ ಮಿರಾಕಲ್ ಮೈಂಡ್ ವಿಶೇಷ ಆ್ಯಪ್ ಅನ್ನು ಬಿಡುಗಡೆ ಗೊಳಿಸುತ್ತಿದ್ದು, ಇದರ ಮೂಲಕ 300 ಕೋಟಿ ಜನರನ್ನು ತಲುಪಿ, ಮಿದುಳಿನ ವಿಸ್ಮಯ, ಧ್ಯಾನ ಸೇರಿದಂತೆ ಮಹತ್ವದ ವಿಚಾರಗಳನ್ನು ಚಟುವಟಿಕೆಯ ಮೂಲಕ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದು ಸದ್ಗುರು ತಿಳಿಸಿದರು. ಮನುಷ್ಯನ ಎಲ್ಲ ಚಿಂತನೆಗಳಿಗೂ ಮಿದುಳೇ ಪ್ರಮುಖ ಕಾರಣ. ದೇವರು, ದೆವ್ವ ಸೇರಿ ನಮ್ಮೊಳಗೆ ಸೃಷ್ಟಿಸಿದ ಒತ್ತಡ, ಖುಷಿ ಎಲ್ಲವೂ ಇದರಲ್ಲಿಯೇ ಅಡಗಿದೆ. ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದ್ದು ಮಿದುಳಿನ ವಿಸ್ಮಯಗಳ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.

ಬಾಂಗ್ಲಾ ದೌರ್ಜನ್ಯ ಖಂಡನೀಯ

ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದ್ಗುರು, ಯಾವುದೇ ಮನುಷ್ಯನ ಮೇಲೆ ದೌರ್ಜನ್ಯ ನಡೆಸುವುದೇ ತಪ್ಪು. ಇದಕ್ಕೆ ಯಾರ ಅಭಿಪ್ರಾಯ ಬೇಕಾಗಿರುವುದಲ್ಲ. ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದನ್ನರಿತು ಸರ್ಕಾರವು ಜನ ಅಪೇಕ್ಷಿತ ರೀತಿಯಲ್ಲಿ ನಡೆದುಕೊಳ್ಳಲಿದೆ. ಇದನ್ನು ಹೇಳಬೇಕಾಗಿಲ್ಲ. ಮಾಡಿ ತೋರಿಸಬೇಕು ಎಂದು ಸದ್ಗುರು ಒತ್ತಾಯಿಸಿದರು. ಸಮುದಾಯಗಳ ಗಲಾಟೆಯಿಂದ ಎರಡು (ಭಾರತ ಮತ್ತು ಪಾಕಿಸ್ತಾನ) ರಾಷ್ಟ್ರಗಳ ಸೃಷ್ಟಿಯ ಮೂಲಕ ವಿಭಜನೆ, ಮತ್ತೊಂದು ಹೊಸ ರಾಷ್ಟ್ರ (ಬಾಂಗ್ಲಾದೇಶ) ನಿರ್ಮಾಣಕ್ಕೆ ಭಾರತೀಯ ಅನೇಕ ಸೈನಿಕರು ಹುತಾತ್ಮರರಾಗಬೇಕಾದ ವಿದ್ಯಮಾನ ನಡೆಯಿತು. ಇದರಿಂದಲಾದರೂ ಪಾಠ ಕಲಿಯಬೇಕಿದೆ ಎಂದರು.

ಈಶ ಕೇಂದ್ರದಲ್ಲಿ ಭಕ್ತಗಣ

ಶಸ್ತ್ರಚಿಕಿತ್ಸೆ ಚಿಕಿತ್ಸೆ ಮಾಡಿಸಿಕೊಂಡ 10 ತಿಂಗಳ ಬಳಿಕ ಸದ್ಗುರುಗಳ ಆಗಮನ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಈಶ ಆದಿಯೋಗಿ ಧ್ಯಾನ ಕೇಂದ್ರಕ್ಕೆ ಆಗಮಿಸಿತ್ತು. ಎಂದಿನಂತೆ ಭಾನುವಾರ ರಜೆ ದಿನದ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಂದ ಜನರು ಬಂದು ಆದಿಯೋಗಿ, ನಾಗದೇವ, ಬಸವನ ದರ್ಶನ ಪಡೆದರು. ಸಂಜೆ ಹೆಲಿಕಾಪ್ಟರ್‌ನಲ್ಲಿ ಸದ್ಗುರುಗಳು ಬಂದು ಇಳಿಯುತ್ತಿದ್ದಂತೆ ಭಕ್ತರು ನಮಿಸುವ ಜತೆಗೆ ಘೋಷಣೆ ಕೂಗಿ, ಸದ್ಗುರುಗಳ ಆಶೀರ್ವಾದ ಪಡೆದರು. ರಾತ್ರಿ ದೇವರಿಗೆ ಆರತಿ ಬೆಳಗುವುದರೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಭಜನೆ, ಸದ್ಗುರುಗಳ ಉಪನ್ಯಾಸದ ಬಳಿಕ ಲೇಸರ್ ಲೈಟಿಂಗ್ ಶೋ ಭಕ್ತರ ಮನಸೋರೆಗೊಂಡಿತು.

ಇಲೆಕ್ಟ್ರಿಕ್ ವಾಹನದಿಂದಲೂ ದುಷ್ಪರಿಣಾಮ

ಹೊಗೆ ಸೂಸುವುದನ್ನು ತಪ್ಪಿಸುವ ಮೂಲಕ ಪರಿಸರ ಕಾಪಾಡುವ ನಿಟ್ಟಿನಲ್ಲಿ ಇಲೆಕ್ಟ್ರಾನಿಕ್ ವಾಹನ ಬಳಸಲು ಆದ್ಯತೆ ನೀಡಲಾಗುತ್ತಿದೆ. ಆದರೆ, ನಗರ, ಪಟ್ಟಣ ಪ್ರದೇಶಗಳಿಗೆ ಮಾತ್ರ ಅನುಕೂಲಕರ. ಆದರೆ, ಇದರಿಂದ ವಿದ್ಯುತ್ ಉತ್ಪಾದನೆಗೆ ಇತರ ಇಂಧನಗಳ ಬಳಕೆ, ದುಬಾರಿ ವೆಚ್ಚದ ಹೊರೆ, ಉಷ್ಣಾಂಶ ಹೆಚ್ಚಳ ಸೇರಿ ನಾನಾ ಸಮಸ್ಯೆ ಬಾಧಿಸುತ್ತವೆ ಎಂದು ಎಚ್ಚರಿಸಿದ ಸದ್ಗುರು, ಒಂದು ಕೆಲಸಕ್ಕೆ ಕೈ ಹಾಕಿದಾಗ ಉದ್ದೇಶಿತ ಕೆಲಸದ ಜತೆಗೆ ಇತರ ಪರಿಣಾಮಗಳ ಬಗ್ಗೆಯೂ ಅರಿಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net