

ಬೆಂಗಳೂರು: ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಈ ಸಲ ಡಿಸೆಂಬರ್ 7ರಿಂದ 15ರ ತನಕ ನಡೆಸುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಅಧಿವೇಶನ ಆಯೋಜಿಸುವುದಕ್ಕೆ ನಿಯಮಗಳನ್ನು ಮಾಡಲಾಗಿದ್ದು, ಅದರಂತೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಅವಧಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಬೇಕಾಗಿದೆ. ಇದರಂತೆ, ಸಚಿವ ಸಂಪುಟ ಈ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಕೋವಿಡ್ 19 ಸೋಂಕಿನ ಕಾರಣ ಈ ಸಲ ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸಲಾಗಿತ್ತು. ಅದು ಕೇವಲ ಎರಡೇ ದಿನಕ್ಕೆ ಸೀಮಿತಗೊಳಿಸಿ ನಡೆಸಲಾಗಿತ್ತು.