

ಕಾಸರಗೋಡು: ಕಾಡಾನೆ ದಾಳಿಯಿಂದ ದೇಲಂಪಾಡಿ ಪಂಚಾಯಿತಿಯ ಮಯ್ಯಳ ಪ್ರದೇಶದಲ್ಲಿ ವ್ಯಾಪಕ ಕೃಷಿ ನಾಶವುಂಟಾಗಿದೆ. ಆದೂರು, ಬೋವಿಕ್ಕಾನ ಪ್ರದೇಶದಲ್ಲಿ ಕಂಡುಬರುತ್ತಿದ್ದ ಕಾಡಾನೆಗಳು ಇದೇ ಮೊದಲಬಾರಿಗೆ ಮಯ್ಯಳ ಪ್ರದೇಶಕ್ಕೆ ಲಗ್ಗೆಯಿಟ್ಟಿದೆ. ಮಯ್ಯಳ ಪ್ರದೇಶದ ಹಲವು ಮಂದಿ ಕೃಷಿಕರ ಅಡಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಕೃಷಿಯನ್ನು ಹಾಳುಗೆಡಹಿದೆ. ಶುಕ್ರವಾರ ನಸುಕಿನ ವೇಳೆಗೆ ಮಯ್ಯಳ ನಿವಾಸಿ ಸದಾನಂದ ಪೂಜಾರಿ ಎಂಬುವರ ತೋಟದಿಂದ ಶಬ್ದ ಕೇಳಿ ಬಂದಿದ್ದು, ಬೆಳಗ್ಗೆ ತೋಟಕ್ಕೆ ತೆರಳಿ ನೋಡಿದಾಗ ವ್ಯಾಪಕ ಕೃಷಿನಾಶವಾಗಿರುವುದು ಪತ್ತೆಯಾಗಿದೆ.