

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಉಡುಪಿ-ಕಾಸರಗೋಡು ನಡುವೆ ಹಾದು ಹೋಗುವ 400 ಕೆವಿ ವಿದ್ಯುತ್ಲೈನ್ ಅಳವಡಿಕೆ ವಿರೋಧಿಸಿ, ಕಂಪನಿಯವರ ದುರ್ವರ್ತನೆ ಖಂಡಿಸಿ ವಿದ್ಯುತ್ಲೈನ್ ವಿರೋಧಿ ಹೋರಾಟ ಸಮಿತಿಯಿಂದ ಜು.30ರಂದು ಬೆಳಗ್ಗೆ 10ಕ್ಕೆ ಮಿಜಾರು ಗೋಪಾಲಕೃಷ್ಣ ದೇವಸ್ಥಾನ ಬಳಿಯ ಬೈತರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಿಜಾರು, ಇರುವೈಲು, ಕಿಲೆಂಜಾರು, ಕೊಳವೂರು, ಬಂಟ್ವಾಳ, ವಿಟ್ಲ, ಐಕಳ, ಏಳಿಂಜೆ, ಮೂಡುಬಿದಿರೆ ಹಾಗೂ ಉಡುಪಿ ಜಿಲ್ಲೆ ಯೋಜನೆಯ ಸಂತ್ರಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವಿದ್ಯುತ್ಲೈನ್ ಅಳವಡಿಕೆಗೆ ರೈತರ ತೀವ್ರ ವಿರೋಧವಿದ್ದು, ಜಿಲ್ಲಾಧಿಕಾರಿ, ಸಚಿವರು ಹಾಗೂ ಜಿಲ್ಲೆ ಶಾಸಕರಿಗೆ ಮನವಿ ಮಾಡಿದ್ದರೂ ಕಡೆಗಣಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯವರು ಯೋಜನೆಯಿಂದ ಬಾದಿತರಾಗುವ ಜಮೀನು ಮಾಲೀಕರಿಗೆ ಯಾವುದೇ ಪೂರ್ವ ಮಾಹಿತಿ, ನೋಟೀಸು ನೀಡದೆ ತಹಸೀಲ್ದಾರರ ಉಪಸ್ಥಿತಿಯಲ್ಲಿ ಏಕಾಏಕಿ ಜೆಸಿಬಿ ತಂದು ಗದ್ದೆಗೆ ನುಗ್ಗಿಸಿ ಹೊಂಡ ತೋಡಿ ಕಾನೂನನ್ನು ಗಾಳಿಗೆ ತೂರಿ ದುರ್ವರ್ತನೆ ತೋರುತ್ತಿದ್ದಾರೆ. ರೈತರ ಬೆಳೆ ಹಾಗೂ ಕೃಷಿ ಭೂಮಿ ರಕ್ಷಿಸಿಕೊಳ್ಳುವುದಕ್ಕಾಗಿ ಹೋರಾಟ ಅನಿವಾರ್ಯ ಎಂದರು.
ಆಲೋನ್ಸ್ ಡಿಸೋಜ, ದಯಾನಂದ ಶೆಟ್ಟಿ ಕಳವೂರು, ಕೃಷ್ಣ ಪ್ರಸಾದ್ ತಂತ್ರಿ, ಶ್ರೀಧರ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ ಏಳಿಂಜೆಗುತ್ತು ಗೋಷ್ಠಿಯಲ್ಲಿದ್ದರು.