ನಾವೇ ಸಮಸ್ಯೆ ಬಗೆಹರಿಸೋದಾದ್ರೆ ಮೀಟಿಂಗ್ ಯಾಕೆ?

sabhe
ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಯಿತು.
Published on

ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಇರುವುದು ಗೊತ್ತಿದ್ದರೂ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಇರುವ ಪಂಚಾಯಿತಿಗಳು ಪ್ರಸ್ತಾವನೆ ಕೊಡಿ ಅಂತ ಹೇಳಿ, ಪ್ರಸ್ತಾವನೆ ನಾವೇ ಕೊಟ್ಟು ನಾವೇ ವ್ಯವಸ್ಥೆ ಮಾಡಿಕೊಳ್ಳವುದಾದರೆ ಈ ವ್ಯವಸ್ಥೆಗಳು ಯಾಕೆ?, ನಮ್ಮ ಸಮಸ್ಯೆಯನ್ನು ನಾವೇ ಪರಿಹಾರ ಮಾಡಿಕೊಳ್ಳುವುದಾದರೆ ಮೀಟಿಂಗ್ ಯಾಕೆ?. ನಮ್ಮ ದುಡ್ಡು ನಾವೇ ಉಪಯೋಗಿಸುವುದಾದರೆ ಅದಕ್ಕೆ ನಿಮ್ಮ ಆದೇಶ ಬೇಕಾ? ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ತಾಲೂಕು ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳು ಚರ್ಚೆ ನಡೆಸಿದರು.

ಅನುದಾನಕ್ಕೆ ಆಗ್ರಹ: ಹಿಂದಿನ ಎರಡು ಆರ್ಥಿಕ ವರ್ಷದ ಮಾರ್ಗಸೂಚಿ ಪ್ರಕಾರ ಟೆಂಡರ್ ಕರೆದು ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಗ್ರಾಪಂನಿಂದ ಸೂಚನೆ ಬಂದಿದೆ. 2 ವರ್ಷ ಹಿಂದಿನ ದರದಲ್ಲಿ ನೀರು ಪೂರೈಕೆ ಮಾಡಲು ಯಾವುದೇ ಗುತ್ತಿಗೆದಾರರೂ ಮುಂದೆ ಬರುತ್ತಿಲ್ಲ. ಗ್ರಾಪಂ ಅನುದಾನದಿಂದಲೇ ನೀರು ಪೂರೈಕೆ ಮಾಡಿ ಎಂದು ಹೇಳುವುದಾದರೆ ಟಾಸ್ಕ್‌ಪೋರ್ಸ್ ಯಾಕೆ? ಪ್ರಸ್ತಾವನೆಗಳು ಯಾಕೆ? ಸಭೆಗಳು ಯಾಕೆ ಎಂದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಪ್ರಶ್ನಿಸಿದರು. ದರ ಪರಿಷ್ಕರಣೆ ಮಾಡುವಂತೆ ಮತ್ತು ಕುಡಿಯುವ ನೀರು ಸರಬರಾಜು ಮಾಡಲು ಟಾಸ್ಕ್‌ಪೋರ್ಸ್ ಮೂಲಕ ಅನುದಾನ ನೀಡುವಂತೆ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಬರಪೀಡತ ಪ್ರದೇಶ ಎಂದು ಘೋಷಣೆಯಾದರೆ ಸರ್ಕಾರ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಗ್ರಾಪಂಗಳಲ್ಲಿ ಲಭ್ಯವಿರುವ ಅನುದಾನದಿಂದಲೇ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು.

ಟ್ಯಾಂಕರ್ ಮೂಲಕ ಪೂರೈಕೆ: ಹೆಮ್ಮಾಡಿ ಮತ್ತು ಕಟ್‌ಬೇಲ್ತೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಎಲ್ಲಿಯೂ ನೀರಿನ ಮೂಲ ಇಲ್ಲ. ಕಟ್‌ಬೇಲ್ತೂರಿನ ಬೋರ್‌ವೆಲ್ ಮೂಲಕ ದಿನ ಬಿಟ್ಟು ದಿನ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಎರಡು ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿಡಿಒ ರಿಯಾಜ್ ಅಹಮ್ಮದ್ ಹೇಳಿದರು.

ಗುಜ್ಜಾಡಿ ಗ್ರಾಮದ ಮಡಿ ಬೆಣ್ಗೇರೆಯಲ್ಲಿ ದಿನ ಬಿಟ್ಟು ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಜನತಾ ಕಾಲನಿ ಮತ್ತು ಕಳಿಹಿತ್ಲು ಪರಿಸರಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಗುಜ್ಜಾಡಿ ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ತಿಳಿಸಿದರು.

ಮಳೆಗಾಲ ಪೂರ್ವ ಸಿದ್ಧತೆ: ಮಳೆಗಾಲದ ಪೂರ್ವ ಸಿದ್ಧತೆ ಬಗ್ಗೆ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಳೆಗಾಲದಲ್ಲಿ ಎದುರಾಗುವ ಕೃತಕ ನೆರೆ ಸಮಸ್ಯೆ ಪರಿಹರಿಸಲು ಚರಂಡಿ ಮತ್ತು ತೋಡುಗಳಲ್ಲಿನ ಹೂಳೆತ್ತುವ ಕೆಲಸ ಆಗಬೇಕು. ಮಳೆಗಾಲದ ಪೂರ್ವ ತಯಾರಿ ಮಾಡಿಕೊಂಡು ಜನರಿಗೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಗಿರೀಶ ದೇವಾಡಿಗ, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ತ್ರಾಸಿ ಪಿಡಿಒ ಶೋಭಾ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಜಿ.ಪಂ. ಕುಡಿಯುವ ನೀರು ವಿಭಾಗದ ಇಂಜಿನಿಯರ್ ಉದಯ ಶೆಟ್ಟಿ, ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸೂಕ್ತ ಕ್ರಮಕ್ಕೆ ಶಾಸಕ ಗಂಟಿಹೊಳೆ ಸೂಚನೆ

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಪಂಗಳಿಂದ ಪ್ರಸ್ತಾವನೆ ಬರಬೇಕೆಂದು ಕಾಯದೆ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಕಳೆದ ಎರಡು ವರ್ಷಗಳ ವರದಿಯನ್ನು ಆಧರಿಸಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಗ್ರಾಪಂಗಳು ಪ್ರಸ್ತಾವನೆ ಕಳುಹಿಸುವುದರಲ್ಲಿ ಅರ್ಥವೇ ಇಲ್ಲ. ನರೇಗಾದಲ್ಲಿ ಬಾವಿ ರಚನೆ ಮಾಡಿಕೊಂಡ ಫಲಾನುಭವಿಗಳಿಗೆ ಬಾಕಿ ಹಣವನ್ನು ತಕ್ಷಣ ಪಾವತಿಸುವಂತೆ ಸೂಚನೆ ನೀಡಿದರು.

ಇನ್ನೂ ಮುಗಿಯದ ಜೆಜೆಎಂ ಕಾಮಗಾರಿ

ವಾರಾಹಿ ನೀರು ಸರಬರಾಜು ಆಗುತ್ತಿರುವುದರಿಂದ ತೆರೆದ ಬಾವಿ ನಿರ್ಮಾಣ ಮಾಡಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ವಾರಾಹಿ ನೀರು ಬರಲು ಇನ್ನೆಷ್ಟು ವರ್ಷಗಳು ಬೇಕೋ, ಅಲ್ಲಿಯವರೆಗೆ ಜನರು ಉಪವಾಸವಿರಲು ಸಾಧ್ಯವಿಲ್ಲ. 2024ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿದ್ದ ಜೆಜೆಎಂ ಕಾಮಗಾರಿಗಳು 2025 ಮಾರ್ಚ್ ಮುಗಿದರೂ ಪೂರ್ಣಗೊಂಡಿಲ್ಲ ಎಂದು ಹಕ್ಲಾಡಿ ಗ್ರಾಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ಹೇಳಿದರು. ಇದಕ್ಕೆ ಧ್ವನಿದೂಡಿಸಿದ ಶಾಸಕ ಗುರುರಾಜ್ ಗಂಟಿಹೊಳೆ, ಅಲ್ಲಲ್ಲಿ ತುಂಡು ತುಂಡು ಕೆಲಸ ನಡೆದಿರುವುದು ಬಿಟ್ಟರೆ ಎಲ್ಲಿಯೂ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಜೆಜೆಎಂ ನೆಪ ಹೇಳಿ ಜನರಿಗೆ ನೀರು ಕೊಡದೆ ತೊಂದರೆ ನೀಡಬಾರದು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net