

ಬೆಂಗಳೂರು: ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಮುಂದೆ ಗುರುವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಬಂಧನ ಭೀತಿಯಿಂದ ಕಳೆದ 5 ದಿನಗಳಿಂದ ತಲೆಮರೆಸಿಕೊಂಡಿದ್ದ ಮಾಡಾಳು ವಿರೂಪಾಕ್ಷಪ್ಪ, ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಲೋಕಾಯುಕ್ತದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಆದರೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಆದೇಶ ಪ್ರತಿ ಲಭ್ಯವಾದ 48 ಗಂಟೆಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ನ್ಯಾಯಾಲಯದ ಮುಂದಿನ ಆದೇಶದವರೆಗೆ ಕೆಎಸ್‌ಡಿಎಲ್‌ಗೆ ಕಚೇರಿಗೆ ಅರ್ಜಿದಾರರು ಹೋಗಬಾರದು ಎಂದು ಹೈಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಅಥವಾ ಗುರುವಾರ ಲೋಕಾಯುಕ್ತ ವಿಚಾರಣಾಧಿಕಾರಿಗಳ ಮುಂದೆ ಹಾಜರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಮತ್ತೊಂದೆಡೆ ಆರೋಪಿಯನ್ನು ಬಂಧಿಸಿದರೆ 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದಿಂದ ಬೀಸುವ ದೊಣ್ಣೆಯಿಂದ ಸದ್ಯ ಪಾರಾಗಿದ್ದು, ಲೋಕಾಯಕ್ತದ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ಅವರನ್ನು ವಿಚಾರಣೆ ನಡೆಸಲು ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಗಿದ್ದು, ವಿರೂಪಾಕ್ಷಪ್ಪ ಅವರಿಗೆ ಕೇಳಲು 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಲವು ಅನುಮಾನಗಳಿಗೆ ಎಡೆ: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇದ್ದರೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಡಳಿತಾರೂಢ ಶಾಸಕರಾಗಿರುವುದರಿಂದ ಅವರನ್ನು ಬಂಧಿಸುವ ಮನಸ್ಸು ಮಾಡಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಏನಿದು ಪ್ರಕರಣ?: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಿರುವ ಸಂಬಂಧ ಗುತ್ತಿಗೆದಾರರಿಗೆ 40 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಯ ಮೇಲೆ ದಾಳಿ ನಡೆಸಿ ಫೆ.2ರಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಸೇರಿ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಲೋಕಾಯುಕ್ತ ದಾಳಿ ಆಗುತ್ತಿದಂತೆ ಮಾಡಾಳು ವಿರೂಪಾಕ್ಷಪ್ಪ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಕಳೆದ 5 ದಿನಗಳಿಂದ ತಲೆಮರೆಸಿಕೊಂಡಿದ್ದರು.