Web Exclusive| 'ಭಾನುವಾರ ಮಾರುಕಟ್ಟೆ' ನನೆಗುದಿಗೆ

Belagavi Sunday Market
ಬೆಳಗಾವಿ ಎಪಿಎಂಸಿ ಪ್ರಾಂಗಣದಲ್ಲಿ ಭಾನುವಾರದ ಮಾರುಕಟ್ಟೆಯು ರೈತರು ಮತ್ತು ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿರುವುದು.
Published on

ಸರ್ಕಾರದ ಕನಸಿನ ಯೋಜನೆಗೆ ರೈತ, ಗ್ರಾಹಕರ ನಿರಾಸಕ್ತಿ | ಬಿಕೋ ಎನ್ನುತ್ತಿರುವ ಮಾರುಕಟ್ಟೆ ಪ್ರಾಂಗಣ

ಮಂಜುನಾಥ ಕೋಳಿಗುಡ್ಡ ಬೆಳಗಾವಿ: ರೈತರ ನಿರಾಸಕ್ತಿ, ಗ್ರಾಹಕರ ಕೊರತೆ ಇನ್ನಿತರ ಕಾರಣಗಳಿಂದಾಗಿ‘ಭಾನುವಾರದ ಮಾರುಕಟ್ಟೆ’ ಯೋಜನೆ ನನೆಗುದಿಗೆ ಬಿದ್ದಿದೆ. ರೈತರು ಬೆಳೆದ ತರಕಾರಿ, ಹಣ್ಣುಗಳು ಮತ್ತು ಅವರು ತಯಾರಿಸಿದ ಉಪ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2015-16ನೇ ಸಾಲಿನ ಬಜೆಟ್​ನಲ್ಲಿ ಭಾನುವಾರದ ಮಾರುಕಟ್ಟೆ ಯೋಜನೆ ಘೊಷಿಸಿತ್ತು. ಯೋಜನೆಯಡಿ ತಲಾ 1 ಕೋಟಿ ರೂ. ಅನುದಾನ ನೀಡಿತ್ತು. ಕೆಲ ಕಡೆ ಸ್ಥಳದ ಅಭಾವ ಮತ್ತು ಹಣಕಾಸಿನ ಕೊರತೆ ಮತ್ತಿತರ ಕಾರಣಗಳಿಂದ ಭಾನುವಾರದ ಮಾರುಕಟ್ಟೆಗಳು ಆರಂಭಗೊಂಡಿಲ್ಲ.

ಏನೇನು ಮಾರಾಟ ಮಾಡಬಹುದಿತ್ತು? ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ ಅವರು ತಯಾರಿಸುವ ಸಜ್ಜೆ, ಜೋಳದ ರೊಟ್ಟಿ, ತುಪ್ಪ, ಬೆಣ್ಣೆ, ಉಪ್ಪಿನಕಾಯಿ, ಹಪ್ಪಳ ಮತ್ತಿತರ ಬಗೆಯ ಚಟ್ನಿ, ಉಪ ಉತ್ಪನ್ನಗಳನ್ನು ಭಾನುವಾರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶವಿತ್ತು. ಇಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ಆಸ್ಪದ ಇರಲಿಲ್ಲ. ಆದರೆ, ಗ್ರಾಹಕರು ಮಾರುಕಟ್ಟೆ ಬರುತ್ತಿರಲಿಲ್ಲ ಇದರಿಂದ ನಷ್ಟವಾಗುತ್ತಿತ್ತು ಎಂದು ತರಕಾರಿ ಬೆಳೆಗಾರ ಮುತ್ತಪ್ಪ ಎಸ್.ನಾಯಕ, ಮಾರುತಿ ಎಸ್.ನಿಂಗಗೋಳ ತಿಳಿಸಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ವ್ಯಾಪಾರ-ವಹಿವಾಟು ಹೊಂದಿರುವ ಮತ್ತು ನೆರೆಯ ರಾಜ್ಯದ ಸಂಪರ್ಕ ಹೊಂದಿರುವ ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಉಡುಪಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಎಪಿಎಂಸಿಗಳ ಪ್ರಾಂಗಣಗಳಲ್ಲಿ ‘ಭಾನುವಾರದ ಮಾರುಕಟ್ಟೆಗಳನ್ನು ನಿರ್ವಿುಸಲಾಗಿತ್ತು. ಆರಂಭದಲ್ಲಿ ಮಾರುಕಟ್ಟೆ ಕುಂಟುಂತ ಸಾಗಿತು. ಬಳಿಕ ರೈತರು ಮತ್ತು ಗ್ರಾಹಕರು ಬಾರದಿರುವ ಕಾರಣ ಭಾನುವಾರದ ಮಾರುಕಟ್ಟೆ ಅಸ್ತಿತ್ವ ಕಳೆದುಕೊಂಡು ಬಂದ್ ಆಗಿದ್ದವು.

ರಾಜ್ಯದಲ್ಲಿ ಸುಮಾರು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೊತ್ತಂಬರಿ, ಪುಂಡಿಪಲ್ಲೆ, ಮೆಂತೆ, ಸಬ್ಬಸಗಿ, ಬೀನ್ಸ್, ಕ್ಯಾಬೀಜ್, ಹೂಕೋಸು, ಹಸಿ ಮೆಣಸಿನಕಾಯಿ, ಚವಳಿಕಾಯಿ, ಬೆಂಡೆ, ಸೌತೆ, ಬದನೆ, ಅವರೆ ಇನ್ನಿತರ ತರಕಾರಿ ಹಾಗೂ ಹಣ್ಣಿನ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ನಿತ್ಯ ನೂರಾರು ಟನ್ ತರಕಾರಿ, ಹಣ್ಣು ಪಂಪಲ ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರೈಲ್ವೆ ಮೂಲಕ ದೆಹಲಿಗೆ ಸರಬರಾಜು ಆಗುತ್ತಿದೆ.

ತರಕಾರಿ, ಹಣ್ಣು ಬೆಳೆಯುವ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಸೂಕ್ತವಾದ ಬೆಲೆ ಸಿಗದೆ ಮಧ್ಯವರ್ತಿಗಳು ನಿಗದಿಪಡಿಸುವ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿವೆ ವಿನಃ ರೈತರು ಮತ್ತು ಗ್ರಾಹಕರಿಗೆ ಲಾಭವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ನೌಕರರು ಇನ್ನಿತರ ಅನುಕೂಲಕ್ಕಾಗಿ ಸರ್ಕಾರವು ನಗರ ಪ್ರದೇಶಗಳಲ್ಲಿ ಭಾನುವಾರದ ಮಾರುಕಟ್ಟೆ ನಿರ್ವಿುಸಿತ್ತು. ಆದರೆ, ಗ್ರಾಹಕರ ಕೊರತೆ, ರೈತರ ನಿರಾಸಕ್ತಿಯಿಂದ ಮಾರುಕಟ್ಟೆ ಬಂದ್ ಆಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ರೈತರು ಮತ್ತು ಗ್ರಾಹಕರಿಗೆ ನೇರ ಸಂಕಲ್ಪ ಕಲ್ಪಿಸುವ ಭಾನುವಾರದ ಮಾರುಕಟ್ಟೆ ಒಳ್ಳೆ ಯೋಜನೆಯಾಗಿತ್ತು. ಇಲ್ಲಿ ಮಧ್ಯವರ್ತಿಗಳನ್ನು ದೂರ ಇಡಲಾಗಿತ್ತು. ಆದರೆ, ಗ್ರಾಹಕರು ಬಾರದಿರುವ ಹಿನ್ನೆಲೆಯಲ್ಲಿ ರೈತರು ಮಾರುಕಟ್ಟೆಗೆ ಬರಲು ನಿರಾಸಕ್ತಿ ತೋರಿಸಿದರು. ಎಪಿಎಂಸಿಗಳ ಆವರಣ ಬದಲಾಗಿ ನಗರ ಪ್ರದೇಶಗಳ ಮಧ್ಯಭಾಗದಲ್ಲಿ ಅಥವಾ ಅಧಿಕ ಪ್ರಮಾಣದಲ್ಲಿ ಜನರು ಓಡಾಡುವ ಪ್ರದೇಶದಲ್ಲಿ ಭಾನುವಾರದ ಮಾರುಕಟ್ಟೆ ಆರಂಭಿಸಿದರೆ ಯೋಜನೆ ಯಶಸ್ವಿಯಾಗುತಿತ್ತು. ಆದರೆ, ನಗರ ಸ್ಥಳೀಯ ಸಂಸ್ಥೆಗಳು ಜಾಗ ನೀಡಲಿಲ್ಲ. | ಡಾ.ಕೆ.ಕೋಡಿಗೌಡ, ಎಪಿಎಂಸಿ ಕಾರ್ಯದರ್ಶಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net