

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಕೊವೀಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಶೇ.50 ರಷ್ಟು ಕಡಿಮೆ ಮಾಡುವಂತೆ ಕೋರಲಾಗುವುದು. ಈ ಕುರಿತು ಎಸ್.ಡಿ.ಎಂ ನ ವಿರೇಂದ್ರ ಹೆಗಡೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ಬಳಿ ಜಿಲ್ಲಾಡಳಿತದಿಂದ ಆರಂಭಿಸಲಾಗಿರುವ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ತಂತ್ರಾಂಶ ಆಧರಿಸಿದ ಆಂಬ್ಯುಲೆನ್ಸ್ ಸೇವೆಗೆ ಶನಿವಾರ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜಾಪುರದ ಎಂ.ಬಿ.ಪಾಟೀಲರ ಬಿ.ಎಲ್.ಡಿ. ಸಂಸ್ಥೆಯ ಆಸ್ಪತ್ರೆಗಳಲ್ಲಿ ಕೊವೀಡ್ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ ಇದೇ ರೀತಿ ಧಾರವಾಡ ಜಿಲ್ಲೆಯ ಎಸ್.ಡಿ.ಎಂ. ಸುಚಿರಾಯು ಅಂತಹ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಮಾಡುವಂತೆ ಕೋರಲಾಗುವುದು ಎಂದರು.
ಜನರು ಆತಂಕ ಪಡುವ ಅಗತ್ಯವಿಲ್ಲ ಜಾಗರೂಕರಾಗಿರಬೇಕು. ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬರಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ಎರಡನೇ ಅಲೆಯಲ್ಲಿ ಕಾಣಿಸಕೊಂಡಿರುವ ರೂಪಾಂತರಿ ವೈರಸ್ ಬಹಳ ಗಂಭಿರವಾಗಿದೆ ಎಂಬುದು ತಾಂತ್ರಿಕ ತಜ್ಞರ ಅಭಿಪ್ರಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ದೇಶದ ಪ್ರಮುಖ ವೈದ್ಯರೊಂದಿಗೆ ಚರ್ಚಿಸಿದ್ದೀನಿ. ಕೋವಿಡ್ ರೋಗಿಗಳಿಗೆ ರೆಮಿಡಿಸಿವರ್ ಒಂದೇ ಮದ್ದಲ್ಲ. ಆದರೆ ಈ ಬಗ್ಗೆ ಜನರಲ್ಲಿ ಆತಂಕ ಮೂಡಿಸಲಾಗುತ್ತಿದೆ ಎಂದು ಜೋಶಿ ಹೇಳಿದರು.