

ಗುರುಪುರ: ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಪೆರಾರ ಮತ್ತು ಮೂಡುಪೆರಾರ ಗ್ರಾಮಗಳಲ್ಲಿ ವಿದ್ಯುತ್, ರಸ್ತೆ, ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ಗುರುವಾರ ಪಡುಪೆರಾರ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಿರುಸಿನ ಚರ್ಚೆ ನಡೆಸಿದರು.
ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ ಸ್ವಾಗತಿಸಿ, ಪ್ರಸಕ್ತ ಸಾಲಿನ ವರದಿ ಹಾಗೂ ವಾರ್ಡ್ ಸಭೆಗಳ ನಡಾವಳಿ ಓದಿದರು. ಬಳಿಕ ಗ್ರಾಮಸ್ಥರ ಪ್ರಶ್ನೆ, ಸಮಸ್ಯೆಗಳಿಗೆ ಪಂಚಾಯಿತಿ ಆಡಳಿತ ಹಾಗೂ ಇಲಾಖಾ ಅಧಿಕಾರಿಗಳು ಉತ್ತರಿಸಿದರು.
ಹಿಂದೆ ಬಜ್ಪೆ ವಿದ್ಯುತ್ ವಲಯ ವ್ಯಾಪ್ತಿಯಲ್ಲಿದ್ದ ನೀಲಕಣಿ ಪ್ರದೇಶವು ಈಗ ಮುಚ್ಚೂರು ವಲಯಕ್ಕೆ ಶಿಫ್ಟ್ ಆಗಿದ್ದು, ಪ್ರಸಕ್ತ ನೀಲಕಣಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಮುಚ್ಚೂರು ವಲಯದ ಸಿಬ್ಬಂದಿ ದೂರು ಸ್ವೀಕರಿಸುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.
ಲೈನ್ಮನ್ಗಳ ಕೊರತೆ ಇದೆ. ನೀಲಕಣಿ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಮುಚ್ಚೂರು ಜೆಇ ಮತ್ತು ಬಜ್ಪೆ ಜೆಇ ಉತ್ತರಿಸಿದರು. ಮೂಡುಪೆರಾರ ಗ್ರಾಮದ ಮುರದಲ್ಲಿ ಆಗಾಗ್ಗೆ ವಿದ್ಯುತ್ ಸ್ಥಗಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರೊಬ್ಬರು ದೂರಿದರು. ಮುರದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೈಕಂಬ ಜೆಇ ದೇವಿಪ್ರಸಾದ್ ಭರವಸೆ ನೀಡಿದರು.
ಗ್ರಾಮದಲ್ಲಿ ಹಸಿಕಸ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವೈದಾಧಿಕಾರಿಗಳೇ ಇಲ್ಲ. ನಿರ್ವಹಣೆ ಕೊರತೆಯಿಂದ ಎರಡೂ ಗ್ರಾಮಗಳ ಕೆಲವೆಡೆ ದಾರಿದೀಪಗಳು ಮತ್ತು ಹೈಮಾಸ್ಟ್ ದೀಪ ಉರಿಯುತ್ತಿಲ್ಲ. ಸುಂಕದಕಟ್ಟೆ ಜಂಕ್ಷನ್ ರಸ್ತೆ ಶೀಘ್ರ ದುರಸ್ತಿಯಾಗಬೇಕು. ಮೂಡುಪೆರಾರದಲ್ಲಿ ಆರೋಗ್ಯ ಮಂದಿರ ಸ್ಥಾಪಿಸಬೇಕು. ಪಂಚಾಯಿತಿಗೆ ಕಾಯಂ ಕಾರ್ಯದರ್ಶಿ, ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ, ಕಾಯಂ ವಿಎ ನೇಮಕವಾಗಬೇಕು ಎಂಬಿತ್ಯಾದಿ ಆಗ್ರಹಗಳು ಕೇಳಿ ಬಂದಿದ್ದು, ಗ್ರಾಮ ವ್ಯಾಪ್ತಿಯ ಬಹುತೇಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಸ್ಪಂದಿಸುತ್ತಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷ ಜಯಂತ ಪೂಜಾರಿ, ಸದಸ್ಯರು, ಪ್ರಭಾರ ಕಾರ್ಯದರ್ಶಿ ಕಮಲಾಕ್ಷ ಎನ್, ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಸಂಗಮೇಶ ಹೆಳವರ, ಅಬಕಾರಿ ನಿರೀಕ್ಷಕಿ ಸುಮಾ ಜಿ.ಎಂ, ಆರೋಗ್ಯ ಇಲಾಖೆಯ ಮುಮ್ತಾಝ್, ಕೃಷಿ, ತಾಪಂ ಇಂಜಿನಿಯರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಇತರ ಇಲಾಖಾ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸರ್ಕಾರಿ ಜಾಗ ಒತ್ತುವರಿ
ಪಡುಪೆರಾರ ಗ್ರಾಮದ ದೊಡ್ಡಪಲ್ಕೆ-ಕೊಂಪದವು ಮುಖ್ಯರಸ್ತೆಯ ದುಗ್ಗಲಚ್ಚಿಲ್-ನೆಲ್ಲಿಕಾಡು-ಕೊಳಪಿಲ ಮೂಲಕ ಮುಂಡಬೆಟ್ಟು ಸಂಪರ್ಕಿಸುವ ಕಚ್ಚಾ ರಸ್ತೆ ಹಾದು ಹೋಗಿರುವಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ವ್ಯಕ್ತಿಯೊಬ್ಬರು ಒಂದು ಕಡೆ ಬೇಲಿ ಅಳವಡಿಸಿ ಸಾರ್ವಜನಿಕ ಸಂಪರ್ಕದ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು. ಒತ್ತುವರಿ ಆಗಿರುವ 230 ಸರ್ವೇ ನಂಬರ್ ಜಾಗದಲ್ಲಿ ಹಾಕಿರುವ ಬೇಲಿ ತೆಗೆಯಲಾಗಿದೆ. 7 ದಿನದೊಳಗೆ ಕಬ್ಬಿಣದ ಕಂಬ ತೆರವುಗೊಳಿಸಲು ಆ ವ್ಯಕ್ತಿಗೆ ಸೂಚಿಸಿದ್ದೇವೆ. ರಸ್ತೆ ನಿರ್ಮಿಸಲು ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಶೀಘ್ರ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಗ್ರಾಮಕರಣಿಕ ದೇವರಾಜ್ ತಿಳಿಸಿದರು. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಂಚಾಯಿತಿ ಪೂರ್ಣ ಸಹಕಾರ ನೀಡಲಿದೆ ಎಂದು ಪಿಡಿಒ ಉಗ್ಗಪ್ಪ ಮೂಲ್ಯ ಹೇಳಿದರು.
ಮೂಡುಪೆರಾರ ಗ್ರಾಮ ಪ್ರತ್ಯೇಕಿಸಲು ಆಗ್ರಹ
ಪಡುಪೆರಾರ ಗ್ರಾಮ ಪಂಚಾಯಿತಿಯಿಂದ ಮೂಡುಪೆರಾರ ಗ್ರಾಮ ಪ್ರತ್ಯೇಕಿಸಿ, ಹೊಸ ಪಂಚಾಯಿತಿ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಒಕ್ಕೊರಳಿನ ಬೇಡಿಕೆ ಇಟ್ಟರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಣಯ ತೆಗೆದುಕೊಂಡು ಮೇಲಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಪಿಡಿಒ ಭರವಸೆ ನೀಡಿದರು.