ಹನಿ ನೀರಿಗೂ ಪರದಾಟ ಇರುವಾಗ ಕಾರು ತೊಳೆಯುತ್ತೀರಾ? 400 ಮಂದಿ ಕಟ್ಟಿದ್ರು 20 ಲಕ್ಷ ರೂ. ದಂಡ!

WhatsApp Image 2024-04-11 at 8.42.54 AM
Published on

ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಬಿಗಿಯಾಗಿದೆ. ನಗರ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ಕಷ್ಟಕರವಾಗುತ್ತಿರುವುದರ ಮಧ್ಯೆ ಅನಗತ್ಯ ನೀರು ಪೋಲು ನಿಷೇಧ ಎಂದು ಸರ್ಕಾರ ಆದೇಶಿಸಿತ್ತು. ಇಷ್ಟಾದರೂ ಸಹ ಕಾರುಗಳನ್ನು ತೊಳೆಯಲು, ದೊಡ್ಡ ಕಟ್ಟಡಗಳ ಕೆಲಸಗಳಿಗೆ, ಗಿಡಗಳಿಗೆ ಕುಡಿಯುವ ನೀರು ಬಳಕೆ ಮಾಡಿದವರಿಗೆ ಈಗಾಗಲೇ ಭಾರೀ ದಂಡ ಬಿಡಬ್ಲ್ಯೂಎಸ್​ಎಸ್​ಬಿ ವಿಧಿಸಿತ್ತು. ಈಗ ಮತ್ತೊಮ್ಮೆ ಅದನ್ನು ಮುಂದುವರೆಸಿದೆ.

ಗಿಡಗಳಿಗೆ, ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ, ಕಾರು ತೊಳೆಯಲು ಅನಗತ್ಯವಾಗಿ ಕುಡಿಯುವ ನೀರನ್ನು ಬಳಕೆ ಮಾಡಿದರೆ ಅಂತವರಿಗೆ 5,000 ರೂ. ಹಣವನ್ನು ದಂಡವಾಗಿ ವಿಧಿಸುತ್ತೇವೆ ಎಂದು ಜಲಮಂಡಳಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದರು.

ಈ ನಿಯಮ ಮೀರಿ ನಗರದ ಕೆಲವು ನಿವಾಸಿಗಳು ಯುಗಾದಿ ಹಬ್ಬದಂದು ಕುಡಿಯುವ ನೀರನ್ನು ಕಾರು, ಬೈಕ್ ತೊಳೆಯಲು ವ್ಯರ್ಥ ಮಾಡಿರುವುದು ಪತ್ತೆಯಾಗಿದೆ. ಈ ಬೆನ್ನಲ್ಲೇ ಅಧಿಕಾರಿಗಳು ಪೂರ್ವ​ ಬೆಂಗಳೂರಿನ ದೊಡ್ಡೇನಕುಂಡಿ ಬಳಿಯಿರುವ ವಿಜ್ಞಾನನಗರದ ಮಧ್ಯ ವಯಸ್ಕ ವ್ಯಕ್ತಿಗೆ 5000 ರೂ. ದಂಡ ವಿಧಿಸಿದ್ದಾರೆ.

ಬಿಡಬ್ಲ್ಯೂಎಸ್​ಎಸ್​ಬಿ ಅಧಿಕಾರಿಗಳ ಪ್ರಕಾರ, ವಾಹನ ಮತ್ತು ಗಿಡಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ್ದಕ್ಕಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ ದಂಡ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಇವರು 407ನೇಯವರು. ಇಲ್ಲಿಯವರೆಗೆ ಒಟ್ಟು 407 ಜನಕ್ಕೆ ದಂಡ ವಿಧಿಸಿದ್ದೇವೆ. ಅವರಿಂದ 20.3 ಲಕ್ಷ ರೂ. ದಂಡವಾಗಿ ಸ್ವೀಕರಿಸಿದ್ದೇವೆ. ಇದೇ ವ್ಯಕ್ತಿಗಳು ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ಮುಂದಿನ ಬಾರಿ 5,500 ರೂ. ಪಡೆಯುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net