

ಅನ್ಯಾರ್ ಇನೋಳಿ ಉಳ್ಳಾಲ
ಗ್ರಾಮೀಣ ಪ್ರದೇಶದ ಒಳರಸ್ತೆಗಳು ತ್ಯಾಜ್ಯ ರಾಶಿಗೆ ನಲುಗಿಹೋಗಿದೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಜನಜಾಗೃತಿ ಪ್ರಮುಖ ಸ್ಥಳಗಳಿಗೆ ಸೀಮಿತವಾಗಿದ್ದರೂ ಇಲ್ಲೂ ಯಾವುದೇ ಪರಿಣಾಮ ಬೀರದ ಕಾರಣ ಪ್ರಮುಖ ರಸ್ತೆಗಳು ತ್ಯಾಜ್ಯಪೀಡಿತವಾಗಿವೆ.
ಸ್ವಚ್ಛ ಭಾರತ ಯೋಜನೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಭಾಷಣ, ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಪಾಲಿಗೆ ಯೋಜನೆ ಬೂಟಾಟಿಕೆಯಾಗಿದೆ. ಇದಕ್ಕೆ ಪ್ರಮುಖ ಸಾಕ್ಷಿ ತಾಲೂಕು ಕಂದಾಯ ಇಲಾಖಾ ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ನಾಟೆಕಲ್ ಪರಿಸರ. ತಹಸೀಲ್ದಾರ್ ಸಹಿತ ವಿವಿಧ ಅಧಿಕಾರಿಗಳು, ವೈದ್ಯರು ಇರುವ ನಾಟೆಕಲ್ ಪರಿಸರ ಅದೆಷ್ಟೋ ವರ್ಷಗಳಿಂದ ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ. ಸ್ಥಳೀಯ ಪಂಚಾಯಿತಿ ಹಾಗೂ ಸ್ವಚ್ಛತಾ ಪ್ರಿಯರು ನಡೆಸಿದ ಯಾವುದೇ ಪ್ರಯತ್ನ ಇಲ್ಲಿ ಲ ನೀಡುತ್ತಿಲ್ಲ ಎನ್ನುವುದಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಒಮ್ಮೆ ತೆರವುಗೊಳಿಸಿದರೂ ಮತ್ತೆ ಮತ್ತೆ ರಾಶಿಬೀಳುತ್ತಿರುವ ತ್ಯಾಜ್ಯವೇ ಸಾಕ್ಷಿ.
ಪಜೀರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವೂರು ಗ್ರಾಮ ಮತ್ತು ಹರೇಕಳ ಸಂಪರ್ಕ ರಸ್ತೆ ಮಲಾರ್, ಕೊಣಾಜೆ ಗ್ರಾಮ ಸಂಪರ್ಕಿಸುವ ಜೋಡುಕಟ್ಟೆ ಪರಿಸರದ ರಸ್ತೆಬದಿ ರಾಶಿಬಿದ್ದಿರುವ ತ್ಯಾಜ್ಯಗ್ರಾಮದ ಘನತೆಯನ್ನು ಮೂರಾಬಟ್ಟೆ ಮಾಡಿದೆ. ಪಂಚಾಯಿತಿ, ಗ್ರಾಮಸ್ಥರು ತ್ಯಾಜ್ಯ ತೆರವುಗೊಳಿಸಿ ಸ್ವಚ್ಛ ಮಾಡಿದರೂ ಕೆಲವೇ ದಿನಗಳಲ್ಲಿ ಈ ಪ್ರಯತ್ನಕ್ಕೆ ಸ್ವಚ್ಛತಾ ವಿರೋಧಿಗಳು ಸವಾಲು ಹಾಕುತ್ತಿದ್ದಾರೆ.
ಎಲ್ಯಾರ್‌ನಿಂದ ಅಂಬ್ಲಮೊಗರು ಹೋಗುವ ರಸ್ತೆಬದಿ, ಅಂಬ್ಲಮೊಗರುವಿನಿಂದ ದೇರಳಕಟ್ಟೆಗೆ ಸಂಪರ್ಕಿಸುವ ರಸ್ತೆಬದಿ ಕಾರ್ಯಕ್ರಮಗಳಿಗೆ ಬಳಸುವ ತಟ್ಟೆ, ಪ್ಲಾಸ್ಟಿಕ್ ಲೋಟಗಳನ್ನು ರಾಶಿಹಾಕಲಾಗಿದೆ. ಕುತ್ತಾರ್ ಸಮೀಪದ ಮದನಿನಗರ ರಸ್ತೆಯಲ್ಲೂ ತ್ಯಾಜ್ಯ ರಾಶಿಬಿದ್ದಿದೆ. ನಾಟೆಕಲ್‌ನಿಂದ ಕೆ.ಸಿ.ರೋಡಿಗೆ ಸಂಪರ್ಕಿಸುವ ನಾಲ್ಕು ಕಿ.ಮೀ. ರಸ್ತೆ ಪೈಕಿ ಮೂರು ಕಿ.ಮೀ.ನಲ್ಲಿ ರಸ್ತೆಯುದ್ದಕ್ಕೂ ಕಸ, ತ್ಯಾಜ್ಯ ತೋರಣ ಕಂಡುಬರುತ್ತದೆ.
ಸರ್ಕಾರ ಜಿಲ್ಲಾ ಪಂಚಾಯಿತಿ ಮೂಲಕ ಪ್ರತೀ ಗ್ರಾಮದಲ್ಲೂ ಸ್ವಚ್ಛ ಸಂಕೀರ್ಣ ನಿರ್ಮಾಣಕ್ಕೆ 20 ಲಕ್ಷ ರೂ. ಮತ್ತು ವಾಹನ ಕೊಡುತ್ತದೆ. ಇದನ್ನು ಪಡೆದ ಕೆಲವು ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣ ಆದರೂ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಮುನ್ನೂರು ಗ್ರಾಮದಲ್ಲಿ ಘಟಕ ಇದ್ದರೂ ನಿರ್ವಹಣೆ ಅಸಾಧ್ಯ ಎನಿಸಿದ್ದರಿಂದ ಗುತ್ತಿಗೆಗೆ ನೀಡಿ ಘಟಕಕ್ಕೆ ಬೀಗ ಹಾಕಲಾಗಿದೆ. ಕುರ್ನಾಡಿನಲ್ಲಿ ಘಟಕ ಏದುಸಿರು ಬಿಡುತ್ತಿದೆ. ಬಾಳೆಪುಣಿಯಲ್ಲಿ ಜೀವಕಳೆ ಉಳಿಸುವ ಪ್ರಯತ್ನ ಮುಂದುವರಿದಿದೆ. ಹರೇಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ರಸ್ತೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಪಾವೂರಿನಲ್ಲಿ ಘಟಕ ಆಗಿ ನಾಲ್ಕು ವರ್ಷಗಳಾಗಿದ್ದು, ವರ್ಷದ ಹಿಂದೆ ಉದ್ಘಾಟನೆ ಆಗಿದೆ. ವಾಹನ ಬಂದು ಮೂರು ವರ್ಷವಾದರೂ ಇನ್ನೂ ಕಾರ್ಯನಿರ್ವಹಿಸದ ಕಾರಣ ಗ್ರಾಮದ ಸಂಪರ್ಕ ರಸ್ತೆಯಲ್ಲಿ ತ್ಯಾಜ್ಯ ರಾರಾಜಿಸುತ್ತಿದೆ. ಕೆಲವು ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹ ಆಗುತ್ತಿದ್ದರೂ ನಿರ್ವಹಣೆ ಎಲ್ಲಿಯಾಗುತ್ತಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ತ್ಯಾಜ್ಯ ರಾಶಿಯಲ್ಲಿ ಮಕ್ಕಳಿಗೆ ಬಳಸಲ್ಪಟ್ಟ ಡಯಾಪರ್‌ಗಳದ್ದೇ ಮೇಲುಗೈ. ಸಣ್ಣ ಮಕ್ಕಳಿರುವ ಮನೆಗಳಲ್ಲಿ ಪೌಷ್ಠಿಕ ಆಹಾರಕ್ಕಿಂತಲೂ ಡಯಾಪರ್ ಖರೀದಿಗೆ ಮೊದಲ ಆದ್ಯತೆ. ಗೋಣಿಗಟ್ಟಲೆ ಡಯಾಪರ್‌ಗಳು ಒಂದೆರೆಡು ದಿನಗಳಲ್ಲಿ ಬಳಕೆಯಾಗಿ ರಸ್ತೆಬದಿ ರಾಶಿ ಬಿದ್ದಿರುತ್ತದೆ. ಡಯಾಪರ್ ನಿಷೇಧ ಹೇರುವುದೊಂದೇ ಇದಕ್ಕೆ ಪರಿಹಾರ ಎಂಬಂತಾಗಿದೆ.
ಕಳೆದ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಬೆಲ್ಮ ಗ್ರಾಮ ಪಂಚಾಯಿತಿಯ ಒಳ ರಸ್ತೆಗಳ ಪರಿಸ್ಥಿತಿ ಚಿಂತಾಜನಕ. ಅಂಬ್ಲಮೊಗರು - ರೆಂಜಾಡಿ ರಸ್ತೆಯಲ್ಲಿ ತ್ಯಾಜ್ಯ ದುರ್ನಾತ ಬೀರುತ್ತಿದೆ. ಜೊತೆಗೆ ಕಟ್ಟಡಗಳ ತ್ಯಾಜ್ಯವೂ ರಾಶಿ ಹಾಕಲಾಗಿದೆ. ರೆಂಜಾಡಿ ಸೇತುವೆ ಮತ್ತು ರಸ್ತೆ, ಅದಲ್ಲದೆ ದೇರಳಕಟ್ಟೆಯಿಂದ ಕೊಣಾಜೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡವಾಗಿರುವ ತ್ಯಾಜ್ಯ ಸಾಂಕ್ರಾಮಿಕ ಕಾಯಿಲೆಗೆ ಆಹ್ವಾನ ನೀಡುತ್ತಿದೆ.
ಜನಶಿಕ್ಷಣ ಟ್ರಸ್ಟ್ ವತಿಯಿಂದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ, ಪಾದಯಾತ್ರೆ, ಕಸ ಹೆಕ್ಕುವ ಕಾರ್ಯಕ್ರಮ ನಿರಂತರ ನಡೆಯುತ್ತಿದ್ದರೂ ಸಾರ್ವಜನಿಕರಿಂದ ನಿರೀಕ್ಷಿತ ಲಿತಾಂಶ ಬಂದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವೇ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬೇಕು. ಅಧಿಕಾರಿಗಳು ಸ್ವತಃ ಪರಿಶೀಲನೆ ನಡೆಸಬೇಕು.- ಇಸ್ಮಾಯಿಲ್ ಕಣಂತೂರು, ಸ್ವಚ್ಛತಾ ಸೇನಾನಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಇದ್ದರೆ ರಾಜ್ಯ ಸರ್ಕಾರವೂ ಘಟಕ ನಿರ್ಮಾಣ, ವಾಹನ ಖರೀದಿಗೆ ಪ್ರೋತ್ಸಾಹ ನೀಡುತ್ತಿದೆ. ಆದರೂ ರಸ್ತೆಬದಿ ತ್ಯಾಜ್ಯರಾಶಿ ಬೀಳುತ್ತಿರುವುದು ನಿಜಕ್ಕೂ ಖೇದಕರ.- ಅನಿಲ್ ಬಗಂಬಿಲ, ಕೋಟೆಕಾರ್ ಪಪಂ ಮಾಜಿ ಉಪಾಧ್ಯಕ್ಷ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಯ ಸ್ವಚ್ಛತೆ ಕಾಪಾಡುವ ಸಲುವಾಗಿ ತ್ಯಾಜ್ಯವನ್ನು ರಸ್ತೆಬದಿ ಎಸೆಯುತ್ತಿರುವುದರಿಂದ ಪರಿಸರ ಕಲುಷಿತಗೊಂಡು ಕಾಯಿಲೆಗೆ ಕಾರಣವಾಗುತ್ತಿದೆ. ಸರ್ಕಾರದ ಯೋಜನೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು, ಸ್ಥಳೀಯಾಡಳಿತ ಮುಂದಾಗಬೇಕು.- ವಿಶಾಲ್ ಕೊಲ್ಯ, ಉಳ್ಳಾಲ ಬ್ಲಾಕ್ ಯುವಇಂಟಕ್ ಅಧ್ಯಕ್ಷ.