ಹಬ್ಬ ನಿಮಿತ್ತ ರಾಜದಾನಿಯಲ್ಲಿ ತ್ಯಾಜ್ಯ ಹೆಚ್ಚಳ

ayudha kasa
Published on

ಬೆಂಗಳೂರು: ಆಯುಧ ಪೂಜೆ ನಿಮಿತ್ತ ನಗರದಲ್ಲಿ ತ್ಯಾಜ್ಯ ಹೆಚ್ಚಳವಾಗಿದೆ. ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಡಿವಾಳ, ಮಲ್ಲೇಶ್ವರ, ಗಾಂಧಿ ಬಜಾರ್ ಸೇರಿ ನಗರದ ಹಲವು ಮಾರುಕಟ್ಟೆಗಳಲ್ಲಿ ಶನಿವಾರದಿಂದ ಸೋಮವಾರದವರೆಗೆ ಮಾರಾಟವಾಗದೇ ಉಳಿದ ಬೂದುಗುಂಬಳ, ಬಾಳೆ ಕಂದು, ಮಾವಿನ ತೋರಣ ತ್ಯಾಜ್ಯಗಳ ರಾಶಿಯೇ ಬಿದ್ದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ 5 ಸಾವಿರ ಟನ್ ಘನತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರಲ್ಲಿ 3,500 ಟನ್‌ಗೂ ಹೆಚ್ಚು ಹಸಿ ಕಸ ಇರುತ್ತದೆ. ಆದರೆ, ಹಬ್ಬದ ಹಿನ್ನೆಲೆಯಲ್ಲಿ 500 ಟನ್‌ಗೂ ಹೆಚ್ಚಿನ ಹಸಿ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪಾದನೆಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಕೆ.ಆರ್.ಮಾರುಕಟ್ಟೆಯಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ಹಬ್ಬದ ಮುನ್ನ ನಗರದ ಹಲವು ರಸ್ತೆಗಳು ಮಿನಿ ಮಾರುಕಟ್ಟೆಗಳಾಗಿ ಮಾರ್ಪಾಟ್ಟಿತ್ತು. ಪೂಜೆಗೆ ಬೇಕಾದ ಬಾಳೆದಿಂಡು, ಹೂ, ಬೂದುಗುಂಬಳ ಕಾಯಿಗಳು ರಾಶಿಗಟ್ಟಲೆ ಹಾಕಲಾಗಿತ್ತು. ಮಾರಾಟವಾಗದೆ ಉಳಿದಿದ್ದ ವಸ್ತುಗಳನ್ನು ವ್ಯಾಪಾರಿಗಳು ರಸ್ತೆಬದಿಯಲ್ಲೇ ಹಾಗೇ ಬಿಟ್ಟಿರುವುದು ಕಂಡುಬಂದಿದೆ.

ಸಾರಕ್ಕಿ ಮಾರುಕಟ್ಟೆ ಸಮೀಪದ ಮೆಟ್ರೋ ಮಾರ್ಗದ ಪಿಲ್ಲರ್ ಸುತ್ತಮುತ್ತ ಮಾರಾಟವಾಗದ ಬಾಳೆಕಂಬ, ರಸ್ತೆಗಳಲ್ಲಿ ಬೂದಗುಂಬಳ ಹಾಗೂ ಮಾವಿನಸೊಪ್ಪಿನ ರಾಶಿಗಳನ್ನು ರಾಶಿಗಳನ್ನು ಕಾಣಬಹುದು. ಬೀದಿ ಬೀದಿಯಲ್ಲೂ ವಾಹನಗಳಿಗೆ ಪೂಜೆ ಮಾಡಲಾಗಿದ್ದ ಬೂದುಗುಂಬಳಕಾಯಿ ತ್ಯಾಜ್ಯ ಬಿದ್ದಿದೆ. ಕೆಲವರು ಕಸದ ರಾಶಿಗೆ ಬೆಂಕಿ ಹಾಕಲಾಗಿದೆ. ಇದರಿಂದಾಗಿ ಪರಿಸರ ಮಾಲಿನ್ಯವೂ ಉಂಟಾಗಿದೆ.

ಕೆಲವೆಡೆ ಬಿಬಿಎಂಪಿ ಪೌರಕಾರ್ಮಿಕರು ವಿಲೇವಾರಿ ಮಾಡಿದ್ದರೆ, ಇನ್ನೂ ಕೆಲವೆಡೆ ತ್ಯಾಜ್ಯ ವಿಲೇವಾರಿ ಮಾಡಿಲ್ಲ. ಭಾರಿ ಪ್ರಮಾಣದಲ್ಲಿ ಬಿದ್ದಿರುವ ಬಾಳ ಕಂದು, ಬೂದಗುಂಬಳ ರಾಶಿನ್ನು ಜೆಸಿಬಿ ಮೂಲಕ ತೆರವು ಮಾಡಲಾಗುವುದು. ಇನ್ನೊಂದು ದಿನದಲ್ಲಿ ಸಂಪೂರ್ಣವಾಗಿ ತ್ಯಾಜ್ಯ ವಿಲೇವಾರಿಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net