More

    ಹಗಲು ದರೋಡೆ ಕೇಂದ್ರವಾದ ಸರ್ಕಾರಿ ಕಚೇರಿಗಳು

    ಕೊಪ್ಪ: ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ತಾಲೂಕು ಬಿಜೆಪಿ ಮಂಡಲದಿಂದ ಬಸ್‌ನಿಲ್ದಾಣ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಅಧಿಕಾರಿಗಳಿಗೆ ಲಂಚ ನೀಡದೇ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದ ಕ್ಷೇತ್ರದಲ್ಲಿ ಇಂದು ಲಂಚ ನೀಡದೇ ಕೆಲಸವೇ ಅಗುತ್ತಿಲ್ಲ. ಸರ್ಕಾರಿ ಕಚೇರಿಗಳು ಹಗಲು ದರೋಡೆ ಕೇಂದ್ರಗಳಾಗಿವೆ ಎಂದು ದೂರಿದರು.
    ಕಾಂಗ್ರೆಸ್ ಸದಸ್ಯರು ಇಲ್ಲದಿರುವುದರಿಂದ ಸರ್ಕಾರಕ್ಕೆ ಈವರೆಗೂ ಪಟ್ಟಣ ಪಂಚಾಯಿತಿ, ನಗರ ಸಭೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಆಗಿಲ್ಲ. ಅಧ್ಯಕ್ಷರ ಮೀಸಲಾತಿ ಪಟ್ಟಿ ಮಾಡದೇ ಮುಖ್ಯಾಧಿಕಾರಿ ಮೂಲಕ ದಂಧೆ ಮಾಡಲು ತೊಡಗಿದ್ದಾರೆ ಎಂದು ಆರೋಪಿಸಿದರು.
    ಶಾಸಕರು ಅಧಿಕಾರಕ್ಕೆ ಬಂದು 5 ತಿಂಗಳಾದರೂ ಅಕ್ರಮ ಸಕ್ರಮ ಸಮಿತಿ ರಚನೆಯಾಗಿಲ್ಲ. ನಾವು ಕೊಟ್ಟ ಸಾಗುವಳಿ ಚೀಟಿಗೆ ಪಹಣಿ ಮಾಡಿಕೊಟ್ಟಿಲ್ಲ. ಜನರಿಗೆ ಹಕ್ಕುಪತ್ರ ಕೊಡಲು ವಿಫಲರಾಗಿದ್ದಾರೆ. ಶಾಸಕರು ಬಿಜೆಪಿ ಸರ್ಕಾರವಿದ್ದಾಗ ವಿವಿಧ ಸಮುದಾಯಗಳಿಗೆ ಬಿಡುಗಡೆ ಮಾಡಿದ ಹಣವನ್ನು ಕೊಡಿಸುವ ಕೆಲಸವನ್ನು ಮಾಡಬೇಕು ಎಂದರು.
    ಜಿಲ್ಲಾ ಬಿಜೆಪಿ ಮುಖಂಡ ಜೆ.ಪುಣ್ಯಪಾಲ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 200 ಮತಗಳಿಂದ ಸೋತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಕೇವಲ 1 ತಿಂಗಳು ಬಂದಿದೆ. ಎರಡನೇ ತಿಂಗಳು ಮೆಸೇಜ್ ಮಾತ್ರ ಬಂದಿದೆ. ಕ್ಷೇತ್ರದ ಶಾಸಕರು 3 ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
    ಮುಖಂಡ ಎಚ್.ಕೆ.ದಿನೇಶ್ ಹೊಸೂರು ಮಾತನಾಡಿ, ಕ್ಷೇತ್ರದಲ್ಲಿ ಈ ಹಿಂದೆ ರೈತಪರ ಎಂದು ಹಸಿರು ಶಾಲು ಹಾಕಿ ಪ್ರತಿಭಟಿಸುತ್ತಿದ್ದವರು ಈಗ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಎಲೆಚುಕ್ಕಿ, ಹಳದಿಎಲೆ ರೋಗ ಪೀಡಿತ ಜಮೀನಿನ ಎಕರೆಯೊಂದಕ್ಕೆ 1ಲಕ್ಷ ರೂ.ಪರಿಹಾರ ನೀಡಬೇಕು ಎಂದು ಹೇಳುತ್ತಿದ್ದ ಶಾಸಕರು ಈಗ ಮಾತನಾಡುತ್ತಿಲ್ಲ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts