More

    ಉಡುಪಿ ಮತದಾರರ ಚಿತ್ತ ಯಾವ ಅಭ್ಯರ್ಥಿಯತ್ತ..?

    ಹಕ್ಕು ಚಲಾಯಿಸುವ ಸುದಿನ — ನಿರ್ಭೀತಿಯಿಂದ ಮಾಡಿ ಮತದಾನ

    ಪ್ರಶಾಂತ ಭಾಗ್ವತ ಉಡುಪಿ
    ಕಳೆದ ಒಂದು ತಿಂಗಳ ಪರ್ಯಂತ ಚುನಾವಣಾ ಪ್ರಚಾರದ ಭರಾಟೆ ಕಂಡುಬಂದಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ರಣಕಣದಲ್ಲಿ ಇನ್ನು ಮತದಾರರದ್ದೇ ಖದರ್​. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​-ಬಿಜೆಪಿ ನಡುವೆ ನೇರ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ, ಒಟ್ಟು 10 ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿ ಯುದ್ಧಾಂಗಣದಲ್ಲಿ ನಿಂತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್​ ಪೂಜಾರಿ, ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಹಾಗೂ ಪೇತರ ಅಭ್ಯರ್ಥಿಗಳು 20ಕ್ಕೂ ಹೆಚ್ಚು ದಿನದಿಂದ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕೆಲ ಬಹಿರಂಗ ಸಭೆ ಸೇರಿದಂತೆ ಮನೆಮನೆ ಪ್ರಚಾರ ಮುಗಿಸಿದ್ದಾರೆ. ಇನ್ನೇನಿದ್ದರೂ ಮತದಾರರದ್ದೇ ನಿರ್ಧಾರ.

    ಸಂಜೆ 6ರ ವರೆಗೆ ಮತದಾನ

    ಉಡುಪಿ-ಚಿಕ್ಕಮಗಳೂರು ಲೋಕಸಭಾ ೇತ್ರದಲ್ಲಿ 1,842 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಇದೆ. 7,68,215 ಪುರುಷ ಮತದಾರರು, 8.16,910 ಮಹಿಳೆಯರು ಹಾಗೂ 37 ತೃತೀಯ ಲಿಂಗ ಮತದಾರರು ಸೇರಿ ಒಟ್ಟು 15,85,162 ಮತದಾರರಿದ್ದಾರೆ. ಉಡುಪಿ ಜಿಲ್ಲಾಡಳಿತ ಮತದಾನಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

    ಪಿಕ್​ಪಾಕೆಟ್​-ಚೊಂಬು ಸದ್ದು

    ಬಿಜೆಪಿ ಹಾಗೂ ಕಾಂಗ್ರೆಸ್​ನ ರಾಜ್ಯ-ರಾಷ್ಟ್ರ ನಾಯಕರ ನಡುವಿನ ಕಿತ್ತಾಟಕ್ಕೆ ಕಾರಣವಾದ ಡೇಂಜರ್​, ಪಿಕ್​ಪಾಕೆಟ್​, ಚೊಂಬು ಜಾಹೀರಾತಿನ ಸದ್ದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೇಳಿಬಂತು. ಜಿಲ್ಲೆಯ ಎರಡೂ ಪಕ್ಷದ ನಾಯಕರು ಅಭಿವೃದ್ಧಿ ವಿಷಯವಾಗಿ ಮಾತನಾಡಲು ಇದೇ ಚೊಂಬು- ಪಿಕ್​ಪಾಕೆಟ್​ ವಿಷಯವೇ ಪ್ರಚಾರದ ವಸ್ತುವಾಗಿ ಗಮನ ಸೆಳೆಯಿತು. ಕ್ಷೇತ್ರದಲ್ಲಿ ಇದು ಒಂದಿಷ್ಟು ಮನರಂಜನೆಯನ್ನೂ ನೀಡಿತು.

    ಸೋಲು-ಗೆಲುವಿನ ಕುತೂಹಲ

    ತಿಂಗಳ ಕಾಲ ಎರಡೂ ಪಕ್ಷದ ಅಭ್ಯರ್ಥಿಗಳ ಪ್ರಚಾರ ವೈಖರಿ, ಹಿಂದಿ ಭಾಷೆಯ ಕುರಿತಾದ ಆರೋಪ-ಪ್ರತ್ಯಾರೋಪ, ಕಾಂಗ್ರೆಸ್​- ಬಿಜೆಪಿಯ ಜಾಹೀರಾತು ಸಮರ ಕಂಡಿರುವ, ಕೇಳಿರುವ ಮತದಾರರ ಚಿತ್ತ ಯಾರತ್ತ ಎನ್ನುವುದು ಶುಕ್ರವಾರ (ಏ.26) ಮತಯಂತ್ರದಲ್ಲಿ ದಾಖಲಾಗಲಿದೆ. ಸೋಲು-ಗೆಲುವಿನ ಕುತೂಹಲ ಜೂನ್​ 4ರ ಫಲಿತಾಂಶದವರೆಗೂ ಮುಂದುವರಿಯಲಿದೆ.

    ಕ್ಷೇತ್ರದಲ್ಲಿ ಕಾಣದ ಅಬ್ಬರದ ಪ್ರಚಾರ

    ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕಂಡುಬರಲಿಲ್ಲ. ಸಿನಿಮಾ ತಾರೆಯರ ಅಥವಾ ಖ್ಯಾತ ನಟರ ಸಂಚಲನ ಎರಡೂ ಪಕ್ಷಗಳಲ್ಲಿ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ಪರವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೀನಾ ಲೇಖಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮಂಡ್ಯ ಸಂಸದೆ ಸುಮಲತಾ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಮಾಧುಸ್ವಾಮಿ, ಮೈಸೂರು ಸಂಸದ ಪ್ರತಾಪ್​ ಸಿಂಹ ಹಾಗೂ ಜಿಲ್ಲೆಯ ನಾಲ್ಕು ಶಾಸಕರು ಪ್ರಚಾರ ನಡೆಸಿದ್ದರು. ಇದಲ್ಲದೆ, ಜಿಲ್ಲಾ ಯುವ ಮೋರ್ಚಾದಿಂದ ಯುವ ಸಂವಾದ, ಒಬಿಸಿ ಮೋರ್ಚಾ ಸಮಾವೇಶ, ಎಸ್ಸಿ-ಎಸ್ಟಿ ಮೋರ್ಚಾ ಸಮಾವೇಶ, ಮಹಿಳಾ ನಾರಿಶಕ್ತಿ ಸಮಾವೇಶ, ರೈತಮೋರ್ಚಾ ಸಮಾವೇಶ ನಡೆದಿತ್ತು. ಕಾಂಗ್ರೆಸ್​ ಅಭ್ಯರ್ಥಿ ಪರವಾಗಿ ಸಚಿವ ಕೆ.ಜೆ. ಜಾರ್ಜ್​ ಹೊರತುಪಡಿಸಿದರೆ ಪ್ರಚಾರ ಮಾಡಲು ರಾಜ್ಯ-ರಾಷ್ಟ್ರದ ಪ್ರಮುಖ ನಾಯಕರು ಆಗಮಿಸಿರಲಿಲ್ಲ. ತೇಜಸ್ವಿನಿ ರಮೇಶ್​, ಮೀನುಗಾರರ ಪ್ರಕೋಷ್ಠದ ಮಂಜುನಾಥ್​, ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್​, ಕೆಪಿಸಿಸಿ ವಕ್ತಾರ ಸುಧೀರ್​ಕುಮಾರ್​ ಮುರಳಿ ಆಗಮಿಸಿದ್ದರು. ಎರಡೂ ಪಕ್ಷಗಳಿಗೂ ಕಾರ್ಯಕರ್ತರೇ ಜೀವಾಳವಾಗಿದ್ದು, ಮನೆಮನೆ ಪ್ರಚಾರದಲ್ಲಿ ತಲ್ಲೀನರಾಗಿದ್ದರು.

    ಯಾವುದೇ ಪಕ್ಷಗಳ ಅಥವಾ ಅಭ್ಯರ್ಥಿಗಳ ಆಮಿಷಕ್ಕೆ ಒಳಗಾಗದೆ ಅರ್ಹ ಎಲ್ಲ ಮತದಾರರೂ ಇಂದು ತಪ್ಪದೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕು. ಮತದಾನ ಮಾಡಲು ಸಾರ್ವತ್ರಿಕ ರಜೆ ನೀಡಲಾಗಿದೆ. ಎಲ್ಲ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹಕ್ಕು ಚಲಾಯಿಸಲು ರಜೆ ನೀಡಬೇಕು. ಅಥವಾ ಮತದಾನ ಮಾಡಿ ಬರಲು ಸಮಯಾವಕಾಶವನ್ನಾದರೂ ಕೊಡಬೇಕು. ಇಲ್ಲದಿದ್ದಲ್ಲಿ ಅಂತಹ ಸಂಸ್ಥೆಗಳ ಮಾಲೀಕರ ವಿರುದ್ಧ ಚುನಾವಣಾ ಆಯೋಗದ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.

    ಡಾ.ಕೆ.ವಿದ್ಯಾಕುಮಾರಿ.
    ಜಿಲ್ಲಾ ಚುನಾವಣಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts