ತ್ಯಾಜ್ಯ ವಿಲೇಯೇ ಸವಾಲು!

thy
Published on

ಹೇಮನಾಥ್ ಪಡುಬಿದ್ರಿ

ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯಿತಿಗಳ ಪೈಕಿ ಒಂದಾದ ಪಡುಬಿದ್ರಿ ಗ್ರಾಪಂಗೆ ತ್ಯಾಜ್ಯ ವಿಲೇಗೆ ಕಡಿವಾಣ ಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ದಶಕಗಳಿಂದ ತ್ಯಾಜ್ಯಗಳೇ ತುಂಬಿ ಕಪ್ಪು ಚುಕ್ಕೆ ಪ್ರದೇಶಗಳೆಂದು ಗುರುತಿಸಲ್ಪಟ್ಟ ಗ್ರಾಪಂನ ಕೆಲ ವಾರ್ಡ್‌ಗಳಲ್ಲಿ ಸ್ವಚ್ಛಗೊಳಿಸಿ ದಂಡನೆ ಬ್ಯಾನರ್ ಅಳವಡಿಸುವುದರ ಜತೆಗೆ ಸಿಸಿ ಕ್ಯಾಮರಾ ಕಣ್ಗಾವಲಿರಿಸಿ ಹತೋಟಿಗೆ ತರುವ ಪ್ರಯತ್ನಗಳೂ ನಡೆದಿವೆ. ಆದರೂ ಜನ ಪದೇಪದೆ ತ್ಯಾಜ್ಯ ಎಸೆದು ಗ್ರಾಪಂ ಕಾರ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ.

ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಜನಸಂಖ್ಯೆಯಿದ್ದು, ಎಲ್ಲ ಕಡೆಯಿಂದಲೂ ತ್ಯಾಜ್ಯ ದೊರೆತರೆ ವ್ಯವಸ್ಥಿತವಾಗಿ ನಿರ್ವಹಿಸಲು ಕನಿಷ್ಠ ಒಂದು ಎಕರೆ ಭೂಮಿ ಅವಶ್ಯಕತೆಯಿದೆ. ಕೆಲವು ವರ್ಷಗಳ ಹಿಂದೆ ಗ್ರಾಪಂ ಮುಂಭಾಗದಲ್ಲೇ ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಆರಂಭಿಸಿ, ಕೆಲವೇ ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹಿಸಲು ಕ್ರಮ ವಹಿಸಲಾಗಿತ್ತು. ಆದರೆ ಗ್ರಾಪಂ ಮನೆಗಳಿಂದ ಒಣ ಕಸ ಜತೆಗೆ ಹಸಿಕಸವನ್ನೂ ಸಂಗ್ರಹಿಸಿದ್ದರಿಂದ ಘಟಕದ ಪ್ರದೇಶ ಡಂಪಿಂಗ್ ಯಾರ್ಡ್ ಆಗಿ ಬದಲಾಗಿತ್ತು. ತ್ಯಾಜ್ಯ ಸಂಗ್ರಹಣೆಗೆ ಜಮೀನು ಸಮಸ್ಯೆ ಇರುವುದನ್ನು ಮನಗಂಡ ಬಳಿಕ ಖಾಸಗಿ ಜಮೀನೊಂದರಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಪಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ಗೊಬ್ಬರ ಘಟಕ ಆರಂಭಿಸಲಾಗಿತ್ತು. ಆದರೆ ಜಾಗದ ತಕರಾರಿನಿಂದ ಭೂಮಿ ಕೈತಪ್ಪಿತು. ಈಗ ಹಸಿ ತ್ಯಾಜ್ಯ ಸಂಸ್ಕರಣೆಗೆ ಎಲ್ಲೂರಿನಲ್ಲಿರುವ ಕಾಪು ಪುರಸಭೆಯ ಘನತ್ಯಾಜ್ಯ ಘಟಕವನ್ನೇ ಆಶ್ರಯಿಸುವಂತಾಗಿದೆ.

ಜಮೀನಿಗಾಗಿ ಹುಡುಕಾಟ

ಸುಜ್ಲಾನ್ ಯೋಜನೆ ಅನ್ವಯ ತ್ಯಾಜ್ಯ ನಿರ್ವಹಣೆಗೊಳ್ಳುತ್ತಿದ್ದ ಭೂಮಿ ಸ್ವಾಧೀನಗೊಂಡಿದ್ದು, ಪಡುಬಿದ್ರಿ ಗ್ರಾಪಂಗೆ ತ್ಯಾಜ್ಯ ನಿರ್ವಹಣೆಗೆಂದು ಸ್ವಂತ ಭೂಮಿ ಇಲ್ಲದಾಗಿದೆ. ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕಾಗಿ ಇನ್ನೂ ಭೂ ಪ್ರದೇಶದ ಹುಡುಕಾಟ ನಡೆಯುತ್ತಿದ್ದು, ತ್ಯಾಜ್ಯದ ಪ್ರಮಾಣ ಹಾಗೂ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶೀಘ್ರವೇ ಸಮಸ್ಯೆ ನಿವಾರಿಸಲು ಗ್ರಾಪಂಗೆ ಒತ್ತಡ ಹೆಚ್ಚಾಗುತ್ತಿದೆ.

ಶುಲ್ಕ ಪಾವತಿ ನೆಪದಿಂದ ಹಿಂದೇಟು

ಪಂಚಾಯಿತಿ ಮುಂಭಾಗದಲ್ಲೇ ಘನತ್ಯಾಜ್ಯ ವಿಲೇ ಘಟಕವಿದ್ದರೂ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಗ್ರಾಮದಲ್ಲಿ 5,500 ಮನೆಗಳಿದ್ದರೂ, 2,500 ಮನೆಗಳಿಂದ ಮಾತ್ರ ಕಸ ಸಂಗ್ರಹಣೆಯಾಗುತ್ತಿದೆ. ಕಸ ಸಂಗ್ರಹಿಸಲು ಶುಲ್ಕ ಪಾವತಿಬೇಕೆಂಬ ನಿಟ್ಟಿನಲ್ಲಿ ಕೆಲವು ವಾರ್ಡ್‌ಗಳಲ್ಲಿರುವ ಮನೆಗಳು ಕಸ ನೀಡಲು ಹಿಂದೇಟು ಹಾಕುತ್ತಿವೆ.

ಪಡುಬಿದ್ರಿಯಲ್ಲಿ ತ್ಯಾಜ್ಯ ವಿಲೆಯೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಸಹಿತ ಗ್ರಾಮಾಂತರ ರಸ್ತೆಗಳ ಇಕ್ಕೆಲಗಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಸಮಸ್ಯೆಯಾಗುತ್ತಿತ್ತು. ಈ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಸಿಸಿ ಕ್ಯಾಮರಾ ಅಳವಡಿಸಿ 5 ಸಾವಿರ ರೂಪಾಯಿ ದಂಡನೆ ಬ್ಯಾನರ್‌ಗಳನ್ನು ಅಳವಡಿಸಿ ಹತೋಟಿಗೆ ಪ್ರಯತ್ನ ನಡೆದಿದೆ. - ಶಶಿಕಲಾ ವೈ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ.

*17 ಸಾವಿರ ಜನಸಂಖ್ಯೆಯಿರುವ ಜಿಲ್ಲೆಯ ಅತಿ ದೊಡ್ಡ ಗ್ರಾಮ *ಕಾಪು ಪುರಸಭೆಯ ಘನತ್ಯಾಜ್ಯ ಘಟಕ ಅವಲಂಬನೆ ಅನಿವಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net