

ವಿಜಯವಾಣಿ ಸುದ್ದಿಜಾಲ ಬೈಂದೂರು
ವಿದಾನಸಭೆ, ಸಂಸತ್ತು, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮಾಲೋಚಿಸಿದ ಮಾತ್ರಕ್ಕೆ ದೇಶ ಬಲಿಷ್ಟವಾಗುವುದಿಲ್ಲ. ಈ ದೇಶ ಸಧೃಡವಾಗಬೇಕಾದರೆ ಪ್ರತಿ ತರಗತಿ ಕೋಣೆಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಭವ್ಯ ಭಾರತದ ಭವಿಷ್ಯ ಬಲಿಷ್ಟಗೊಳ್ಳುತ್ತದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಡಿಜಿಟಲ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.
ಕನಸುಗಳೇ ಇಲ್ಲದ ವ್ಯವಸ್ಥೆ ನಡುವೆ ಸಮಾಜ ಕಟ್ಟುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯಲ್ಲಿ ಉದ್ಯೋಗ, ಆರೋಗ್ಯ, ಶಿಕ್ಷಣ ವ್ಯವಸ್ಥೆ ಬಲಪಡಿಸುವಿಕೆ, ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಡಾ.ಗೋವಿಂದ ಬಾಬು ಪೂಜಾರಿ ಕೈಗೊಂಡಿರುವ ಯೋಜನೆ ಯಶಸ್ಸು ಹೊಂದಲಿದೆ ಎಂದು ಹಾರೈಸಿದರು.
ಎಸ್ಡಿಎಂಸಿ ಅಧ್ಯಕ್ಷೆ ಶಾರದಾ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಸಿದರು. ಮುಖ್ಯ ಶಿಕ್ಷಕ ಮಂಜುನಾಥ ಬಿಜೂರು, ಗ್ರಾಪಂ ಸದಸ್ಯರಾದ ರಾಜೇಂದ್ರ ಬಿಜೂರು, ರಮೇಶ್ ದೇವಾಡಿಗ, ಗಂಗಾಧರ ದೇವಾಡಿಗ, ನಾಗೂರು ಸಂದೀಪ್, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನಂದೀಶ್ ದೇವಾಡಿಗ, ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಜಯರಾಮ ಶೆಟ್ಟಿ ಬಿಜೂರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕವಿತಾ ಸ್ವಾಗತಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.
ಶಾಲೆಯನ್ನು ದತ್ತು ಪಡೆದು ಒಂದು ವರ್ಷವಾದ ಪ್ರಯುಕ್ತ ಈ ಭಾಗದಲ್ಲಿ ಪ್ರಪ್ರಥಮವಾಗಿ ಡಿಜಿಟಲ್ ಕ್ಲಾಸ್ಗೆ ಚಾಲನೆ ನೀಡಲಾಗಿದೆ. ಈಗಾಗಲೇ ಶಾಲೆಯಲ್ಲಿ ದಾಖಲಾತಿ, ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಪಾಠೇತರ ಚಟುವಟಿಕೆ ಬಗ್ಗೆ ಬದಲಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೊಸ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. -ಡಾ.ಗೋವಿಂದ ಬಾಬು ಪೂಜಾರಿ ಬಿಜೂರು, ಟ್ರಸ್ಟ್ ಅಧ್ಯಕ್ಷ https://www.vijayavani.net/udupi-bjp-protest-against-state-govt https://www.vijayavani.net/tuluveshwara-temple-on-the-verge-of-extinction