

ಸತೀಶ್ ಕೆ. ಬಳ್ಳಾರಿ ಬೆಂಗಳೂರು: ಕಸ ಸಂಗ್ರಹಣೆಗೆ 8 ವರ್ಷಗಳಿಂದ ಟೆಂಡರ್ ಜಾರಿಯಾಗಿಲ್ಲ. 2016ರಲ್ಲಿ ಹಸಿ ಕಸದ ಟೆಂಡರ್ ಕರೆಯಲಾಗಿತ್ತು. ಈಗ ಅದನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಜಾರಿಯಾಗಿದ್ದು, ಯಾವ ಟೆಂಡರ್ ಪ್ರಕ್ರಿಯೆ ಮುನ್ನೆಲೆಗೆ ಬರುವುದು ಎಂಬುದು ಗೊಂದಲಕ್ಕೆ ಕಾರಣವಾಗಿದೆ.
ಮುಂದಿನ ವಾರ ವಿಚಾರಣೆ 45 ಗು ತಿಗ್ತೆದಾರರ ಟೆಂಡರ್ ಪಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ನೀಡುವ ಹಂತದಲ್ಲಿತ್ತು. ಕೂಡಲೇ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈಗ ಇಡೀ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ, ಹೊಸ ಟೆಂಡರ್ ಪ್ರಕ್ರಿಯೆ ಕರೆಯಲು ಮುಂದಾಗಿರುವ ಬಿಬಿಎಂಪಿ ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಜಾರಿಯಾಗಿದೆ. ಈಗ ಹೈಕೋರ್ಟ್ನಲ್ಲಿ ಯಾವ ಆದೇಶ ಹೊರ ಬೀಳುವುದೋ ಅದರ ಆಧಾರದಲ್ಲಿ ಯಾವ ಟೆಂಡರ್ ಪ್ರಕ್ರಿಯೆ ಜಾರಿಯಾಗಲಿದೆ ಎಂಬುದು ತೀರ್ಮಾನವಾಗಲಿದೆ. ಪಾಲಿಕೆ ಕೌನ್ಸಿಲ್ ಸಭೆ ನಿರ್ಣಯದಂತೆ ಹಳೆ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಜಾರಿ ಸಂಬಂಧದ ವಿಚಾರಣೆ ಮುಂದಿನ ವಾರ ನಡೆಯಲಿದೆ. ಅಲ್ಲಿ ಯಾವ ಆದೇಶ ಹೊರಬೀಳುವುದೋ ಅದನ್ನು ಪಾಲಿಸುತ್ತೇವೆ ಎಂದು ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ನಗರದಲ್ಲಿ ಪ್ರತಿನಿತ್ಯ 5 ಸಾವಿರ ಮೆಟ್ರಿಕ್ ಟನ್ ಕಸ ಉತ್ಪಾದನೆ ಆಗುತ್ತಿದೆ. ಕಸದ ಸಮಸ್ಯೆಗೆ ತಿಲಾಂಜಲಿ ಇಡಲು ಕಾಂಗ್ರೆಸ್- ದಳ ಮೈತ್ರಿ ಸರ್ಕಾರ ಮುಂದಾಗಿತ್ತು. ಮನೆಗಳಿಂದ ಹಸಿತ್ಯಾಜ್ಯವನ್ನು ಗುತ್ತಿಗೆದಾರರಿಂದ ಸಂಗ್ರಹಿಸಿ ವಿಲೇ ಮಾಡುವುದು ಹಾಗೂ ಒಣ ಕಸವನ್ನು ಸ್ವಯಂಸೇವಾ ಸಂಸ್ಥೆಗಳು ಮತ್ತು ಚಿಂದಿ ಆಯುವವರ ಮೂಲಕ ವೆಚ್ಚವಿಲ್ಲದೆ ಸಂಗ್ರಹಿಸಿ ವಿಲೇವಾರಿ ಮಾಡಲು ತೀರ್ಮಾನಿಸಿತ್ತು. ಹಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು 430 ಕೋಟಿ ರೂ. ವೆಚ್ಚವಾಗುವ ಬಗ್ಗೆ ಅಂದಾಜಿಸಲಾಗಿತ್ತು.
ಹಲವರ ಒತ್ತಡ: ಹಸಿ ಕಸ ಸಂಗ್ರಹಣೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 45 ವಾರ್ಡ್ಗಳ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದು ಬಾಕಿಯಿತ್ತು. ಆದರೆ, ಪಾಲಿಕೆಯಲ್ಲಿ ಮೈತ್ರಿ ಆಡಳಿತ ಕೊನೆಯಾಗಿ, ಬಿಜೆಪಿ ಬಿಬಿಎಂಪಿ ಅಧಿಕಾರದ ಗದ್ದುಗೆ ಏರಿತು. ಕೇವಲ ಹಸಿ ಕಸ ಸಂಗ್ರಹಣೆಯಿಂದ ನಗರದಲ್ಲಿ ಬ್ಲ್ಯಾಕ್ಸ್ಪಾಟ್ಗಳು ಹೆಚ್ಚು ನಿರ್ಮಾಣವಾಗುವ ಸಾಧ್ಯತೆಗಳಿವೆ. ಹೀಗಾಗಿ ಟೆಂಡರ್ ರದ್ದುಗೊಳಿಸಲು ಹಲವು ಸದಸ್ಯರು ಒತ್ತಡ ಹೇರಿದ್ದರು. ಇಂದೋರ್ ಮಾದರಿ ಅಳವಡಿಕೆ ಚಿಂತನೆ ಹಾಗೂ ಬ್ಲ್ಯಾಕ್ಸ್ಪಾಟ್ ನಿರ್ಮಾಣ ನೆಪವೊಡ್ಡಿ, ಹಳೇ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ಗೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಯಿತು. ಹೊಸ ಟೆಂಡರ್ನಲ್ಲಿ ಹಸಿ ಕಸ, ಒಣ ಕಸ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಗ್ರಹಣೆ ಮಾಡಲು ಒಬ್ಬನೇ ಗುತ್ತಿಗೆದಾರನಿಗೆ ಜವಾಬ್ದಾರಿ ವಹಿಸುವ ಕುರಿತು ತೀರ್ವನಿಸಲಾಯಿತು.
ಹೊಸ ಯೋಜನೆ ಸಿದ್ಧ: 198 ವಾರ್ಡ್ಗಳಲ್ಲಿ ಕಸ ಸಂಗ್ರಹಣೆಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸುವುದಕ್ಕೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ವಾರ್ಡ್ ವಾರು ಎಷ್ಟು ಪ್ರಮಾಣದಲ್ಲಿ ಎಷ್ಟು ಕಸ ಉತ್ಪಾದನೆಯಾಗಲಿದೆ ಮತ್ತು ಮೂರು ವಿಧದ ಕಸ ಸಂಗ್ರಹಣೆಗೆ ಅಗತ್ಯವಾದ ಆಟೋ ಮತ್ತು ಕಾಂಪ್ಯಾಕ್ಟರ್ ಲೆಕ್ಕ ಹಾಕಿದ್ದಾರೆ. ಟೆಂಡರ್ ಷರತ್ತುಗಳು ಸೇರಿ ಪೂರ್ಣ ಯೋಜನಾ ವರದಿ ಸಿದ್ಧಗೊಂಡಿದೆ.
ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…
ವೆಚ್ಚ ಏರಿಕೆ: ಪ್ರತಿ ವಾರ್ಡ್ನಲ್ಲಿ ಒಬ್ಬನೇ ಗುತ್ತಿಗೆದಾರನಿಗೆ ತ್ಯಾಜ್ಯ ಸಂಗ್ರಹಿಸುವ ಜವಾಬ್ದಾರಿ ನೀಡಲಾಗುತ್ತದೆ. ಇದರಿಂದ ತ್ಯಾಜ್ಯ ವಿಲೇವಾರಿ ವೆಚ್ಚ ಹಳೆಯ ಹಸಿ ಕಸದ ಟೆಂಡರ್ಗಿಂತ ಶೇ.40 ಅಂದರೆ 250 ಕೋಟಿ ರೂ. ಹೆಚ್ಚಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.