ಉತ್ತಮ ಜನಪ್ರತಿನಿಧಿಗೆ ಮತ ನೀಡಿ: ಶಾಲಿನಿ ರಜನೀಶ್​​

BBMP Jatha
Published on

ಬೆಂಗಳೂರು: ‘ನಮ್ಮ ಹಕ್ಕುಗಳು ಎಷ್ಟು ಪ್ರಮುಖವೋ ಅಷ್ಟೇ ಕರ್ತವ್ಯಗಳು ಮುಖ್ಯ. ಹೀಗಾಗಿ, ಹಕ್ಕುಗಳ ಬಗ್ಗೆ ನಾಗರಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು’ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮತದಾರರಿಗೆ ಕಿವಿ ಮಾತು ಹೇಳಿದ್ದಾರೆ.

ಕೇಂದ್ರ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಬಿಬಿಎಂಪಿ ಶನಿವಾರ ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ್ದಾರೆ.

ರಾಜ್ಯಕ್ಕೆ ಒಳ್ಳೆಯ ಪ್ರತಿನಿಧಿ ಬರಬೇಕು

ವಿಧಾನಸೌಧ ಕಾರ್ಯಕಲಾಪಗಳಲ್ಲಿ ಭಾಗಿಯಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು. ವಿಧಾಸಭೆಗೆ ಕಳುಹಿಸುವಂಥ ಪ್ರತಿನಿಧಿ ಬಗ್ಗೆ ನಾವೆಲ್ಲರೂ ಮೊದಲು ತಿಳಿದುಕೊಂಡು ಅಭ್ಯರ್ಥಿಗೆ ಮತ ಹಾಕಬೇಕು. ರಾಜ್ಯಕ್ಕೆ ಒಳ್ಳೆಯ ಪ್ರತಿನಿಧಿ ಬರಬೇಕು. ಆ ಪ್ರತಿನಿಧಿ ದೇಶ ಹಾಗೂ ರಾಜ್ಯವನ್ನು ಪ್ರಗತಿ ಪಥದತ್ತ ನಡೆಸುವಂತಾಗಬೇಕು.ಅವರು ಮಾಡುವಂಥ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡಬೇಕು. ಸಂವಿಧಾನದಲ್ಲಿರುವ ಮೂಲಭೂತ ವಿಷಯಗಳನ್ನು ತಿಳಿದು ಅದರ ಬಗ್ಗೆ ನಾಗರಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದಿದ್ದಾರೆ.

jatha (1)

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ(ಎನ್‌ಎಸ್‌ಎಸ್) ಕಾರ್ಯನಿರತರಾಗಿರುವ ವಿದ್ಯಾರ್ಥಿಗಳು ನಿಮ್ಮ ಕ್ಷೇತಗಳಲ್ಲಿ ಎಷ್ಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಬಗ್ಗೆ ಮತದಾರರಿಗೆ ತಿಳಿದಿದೆಯೇ, ಉತ್ತಮ ಅಭ್ಯರ್ಥಿ ಯಾರು, ಮತಗಟ್ಟೆಗಳು ಎಲ್ಲಿವೆ, ಅಲ್ಲಿಗೆ ಹೇಗೆ ಹೋಗಬೇಕು ಹಾಗೂ ಏನೆಲ್ಲಾ ವ್ಯವಸ್ಥೆ ಇದೆ ಎಂಬುದರ ಬಗ್ಗೆ ನಿಮ್ಮ ಬಡಾವಣೆಯಲ್ಲಿರುವ ಮತದಾರರಿಗೆ ತಿಳಿಸಬೇಕು. ಯೋಜನೆಯಡಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಚುನಾವಣಾ ಆಯೋಗದ ಜತೆಗೆ ಸೇರಿ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಲಿನಿ ರಜನೀಶ್ ಮಾಹಿತಿ ನೀಡಿದ್ದಾರೆ.

ಐದು ಸಾವಿರ ವಿದ್ಯಾರ್ಥಿಗಳು ಭಾಗಿ

ವಿಧಾನಸೌಧ ಮುಂಭಾಗದಲ್ಲಿ ಆರಂಭವಾದ ಜಾಥಾ ಅಂಬೇಡ್ಕರ್ ರಸ್ತೆ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಹಡ್ಸನ್ ವೃತ್ತದ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು. ಮೊದಲ ಬಾರಿ ಮತದಾನ ಮಾಡುತ್ತಿರುವ ಅಂದಾಜು ಐದು ಸಾವಿರ ವಿದ್ಯಾರ್ಥಿಗಳು ಉತ್ಸಾಹದಿಂದ ಜಾಥಾದಲ್ಲಿ ಭಾಗಿಯಾದರು. ‘ಮತದಾನ ಮಾಡಿ ಒಳ್ಳೆಯ ಸರ್ಕಾರ ಸ್ಥಾಪಿಸೋಣ’, ‘ಕಡ್ಡಾಯವಾಗಿ ಮತದಾನ ಮಾಡುತ್ತೇವೆ’, ‘ತಮ್ಮ ಅಮೂಲ್ಯ ಮತ ಚಲಾಯಿಸಿ’, ‘ಮತದಾನಗಿಂತ ಇನ್ನೊಂದಿಲ್ಲ, ನಾನು ಉಚಿತವಾಗಿ ಮಾತದಾನ ಮಾಡುವೆ’, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರು ಪಾಲ್ಗೊಳ್ಳುವಿಕೆ’ ಹಾಗೂ ‘ಮತದಾನ ಮಾಡಿ ಸಂಭ್ರಮಿಸಿ’ ಲಕಗಳು ರಾರಾಜಿಸಿದ್ದವು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯಿಂದ ಮತದಾನದ ಬಗ್ಗೆ ನಾಟಕ ಪ್ರದರ್ಶನ ನಡೆಯಿತು.

Students

ಯಶಸ್ವಿಗೊಳಿಸಿ

ರಾಜಧಾನಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಇಲಾಖೆಗಳ ಸಹಯೋಗದಲ್ಲಿ ಪ್ರತಿ ನಿತ್ಯ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳಿಂದ ನಾಗರಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಮತ ಚಲಾಯಿಸುವ ಮೂಲಕ ಮತದಾನ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net