

ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗ, ಬಿಎಂಟಿಸಿ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಶುಕ್ರವಾರ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಬಿಎಂಟಿಸಿಯ ಸಾಂಸ್ಕೃತಿಕ ಕಲಾ ಕುಟೀರದ ಕಲಾವಿದರು ಮತ್ತು ಕೆ.ಎಸ್.ಆರ್.ಟಿ.ಸಿಯ ಸಿಬ್ಬಂದಿ ಮತದಾನ ಸಂಕಲ್ಪ ಮಾಡಿ ಮತ್ತು ಬೀದಿ ನಾಟಕವನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು. ಬಿಎಂಟಿಸಿಯ ನಿವೃತ್ತ ಸಿಬ್ಬಂದಿ ಟಿ.ಎಂ ಬಾಲಕೃಷ್ಣ ಅವರ ನಿರ್ದೇಶನದಲ್ಲಿ ಬೀದಿ ನಾಟಕದ ಪ್ರದರ್ಶನ ನೀಡಲಾಯಿತು.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಪೌರಕಾರ್ಮಿಕರು, ವಿದ್ಯಾರ್ಥಿಗಳು ಶಾಂತಿನಗರ ಸುತ್ತ ಮುತ್ತ ಮತದಾನ ಜಾಗೃತಿ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ಮತದಾನದ ಮಹತ್ವ ತಿಳಿಸಿಕೊಟ್ಟರು.
ಮತದಾನ ನಮ್ಮೆಲ್ಲರ ಹಕ್ಕು, ಮೇ 10ರಂದು ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಮ್ಮೆಯಿಂದ ಭಾಗಿಯಾಗಿ ಎಂಬ ಸಾಮಾಜಿಕ ಕಳಕಳಿಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಲಾಯಿತು.
ಜಾಥದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯಪುರ, ಬಿಎಂಟಿಸಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ. ಸೂರ್ಯಸೇನ್, ಬಿಬಿಎಂಪಿ ದಕ್ಷಿಣ ವಲಯ ಉಪ ಆಯುಕ್ತೆ ಲಕ್ಷ್ಮಿ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.