ಮತಬ್ಯಾಂಕ್ ಪರಿಕಲ್ಪನೆ ಹುಟ್ಟುಹಾಕಿದ್ದೇ ಕಾಂಗ್ರೆಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM 1
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ್ಪುಣಸಿ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಸಚಿವರಾದ ಎಸ್. ಟಿ. ಸೋಮಶೇಖರ, ಸಂಸದ ಶಿವಕುಮಾರ ಉದಾಸಿ ಮುಂತಾದವರು ಜತೆಗಿದ್ದರು.
Published on

ಹಾನಗಲ್: ಪ್ರಜಾಪ್ರಭುತ್ವದಲ್ಲಿ ಮತಬ್ಯಾಂಕ್​ ಪರಿಕಲ್ಪನೆಯೇ ತಪ್ಪು, ಮುಗ್ಧ, ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಬಂಡವಾಳ ಆಗಿಸಿಕೊಂಡು ಚುನಾವಣೆ ನಡೆಸುವ ಅವ್ಯವಸ್ಥೆಯನ್ನು ಕಾಂಗ್ರೆಸ್ ತಂದಿದೆ. ಇದರಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತದೆ ಎಂದು ಹಾನಗಲ್​ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.

ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ, ಉದ್ಯೋಗ ಹಾಗೂ ವಿವಿಧ ಅವಕಾಶಗಳಿಂದ ವಂಚಿತವಾದ ಸಮುದಾಯಗಳನ್ನು ಹಾನಗಲ್ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರುವುದೇ ನನ್ನ ಗುರಿ ಎಂದು ಅವರು ಹೇಳಿದರು. ಅವರು ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಭೋವಿ ಸಮುದಾಯದ ಜನರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ದಾಳ ಉರುಳಿಸಿ ಮತ ಕೇಳುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸಮಾಜದ, ಸಮುದಾಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಬೇಕಾಗಿರುವುದು ಸಮುದಾಯಗಳಿಂದ ಮತ ಹಾಕಿಸಿಕೊಂಡು ಅಧಿಕಾರ ಅನುಭವಿಸುವುದು ಎಂದು ಅವರು ಟೀಕಿಸಿದರು.

ಹಾನಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ವಿಭಿನ್ನವಾದ ರೂಪರೇಷೆಯನ್ನು ಸಿದ್ಧಪಡಿಸಿದೆ. ಸರ್ವರ ಏಳಿಗೆ ಸಮುದಾಯದ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಸಾಮರಸ್ಯದ ಬದುಕನ್ನು ಎಲ್ಲರೂ ಜಿಲ್ಲೆಯಲ್ಲಿ ನಡೆಸಬೇಕೆನ್ನುವುದೇ ನಮ್ಮ ಆಶಯ ಎಂದು ಅವರು ಹೇಳಿದರು. ಭೋವಿ ಸಮುದಾಯದ ಜನರು ಅತ್ಯಂತ ಶ್ರಮಜೀವಿಗಳು. ಅವರಂತೆಯೇ ಲಂಬಾಣಿ ಸಮುದಾಯದವರು ಕ್ರಿಯಾಶೀಲರು ಎಂದೂ ಅವರು ಹೇಳಿದರು.

ವಿಶಿಷ್ಟ ಸಮುದಾಯಗಳ ಪಾರಂಪರಿಕ ಕಸುಬುಗಳನ್ನು ಕಾನೂನಿನ ಅಡಿಯಲ್ಲಿ ರಕ್ಷಿಸಲು ಅವಕಾಶವಿದೆ. ಈ ಎಲ್ಲ ಸಮುದಾಯದ ಅಭಿವೃದ್ಧಿಗೆ ಈಗಾಗಲೇ ಚಿಂತನೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸಿ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧ: ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ನಾನು ಈ ಕ್ಷೇತ್ರದ ಸೋದರ. ಶಾಸಕನಾಗಿ, ಸಚಿವನಾಗಿ ಈಗ ಮುಖ್ಯಮಂತ್ರಿಯಾಗಿ ಈ ಭಾಗದ ಸೇವೆ ಮಾಡುವ ಅವಕಾಶ ದೊರೆತಿದೆ. ಈ ಭಾಗದ ಜನರ ಮೂಲಭೂತ ಬೇಕು-ಬೇಡಗಳ ಬಗ್ಗೆ ನನಗೆ ಅರಿವಿದೆ. ಈ ಚುನಾವಣೆಯಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಿ ಮುಂದಿನ ಚುನಾವಣೆಗೆ ಪಟ್ಟಿ ಸಮೇತ ಮತ ಕೇಳಲು ನಿಮ್ಮಮುಂದೆ ಬರುತ್ತೇನೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net