ಸರ್ಕಾರದ ಇಲಾಖೆಗಳಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘನೆ: ರಾಜ್ಯ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘ ಹೇಳಿಕೆ

backward
Published on

ಬೆಂಗಳೂರು: ಹಿಂದುಳಿದ ಗುತ್ತಿಗೆದಾರರಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿದ್ದರೂ ಸರ್ಕಾರದ ಹಲವು ಇಲಾಖೆಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯ್ದೆ (ಕೆಟಿಟಿಪಿ)ಯನ್ನು ಉಲ್ಲಂಘಿಸಲಾಗುತ್ತಿದೆ. ಹಾಗಾಗಿ, ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ, ರಾಜ್ಯ ಹಿಂದುಳಿದ ವರ್ಗಗಳ (ಪ್ರವರ್ಗ-1 ಮತ್ತು 2ಎ) ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.

ಕೆಲ ಇಲಾಖೆಗಳಲ್ಲಿ ಮಾತ್ರ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಕೆಟಿಪಿಪಿ ಕಾಯ್ದೆ ಅನ್ವಯದಂತೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೆ,ಬಹುತೇಕ ಇಲಾಖೆಗಳಲ್ಲಿ ಈ ಕಾಯ್ದೆಯನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸಂಘಕ್ಕೆ ಗುತ್ತಿಗೆದಾರರು ದೂರು ಸಹ ನೀಡಿದ್ದಾರೆ. ಇಲಾಖೆ ಮುಖ್ಯಸ್ಥರು ಯಥವತ್ತಾಗಿ ಕಾಯ್ದೆಯನ್ನು ಪಾಲಿಸಬೇಕು. ಇಲ್ಲದಿದ್ದರೆ, ಆಯಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಚೇರಿ ಮುಂದೆ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಕೆ.ಎಲ್​.ಸುರೇಶ್​ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಇದನ್ನು ಖಂಡಿಸಿ ಜಿಲ್ಲಾ ಮಟ್ಟದಲ್ಲಿಯೂ ಹೋರಾಟ ರೂಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಗುತ್ತಿಗೆದಾರರು ಸದಸ್ಯತ್ವ ಪಡೆಯಬೇಕು. ಇದರಿಂದ ಸಂಘಕ್ಕೆ ಹೆಚ್ಚಿನ ಬಲ ಸಿಗುವ ಜೊತೆಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಹೇಳಿದರು.

ನಿರಂತರವಾಗಿ ಹೋರಾಟ ನಡೆಸಿದ್ದ ಫಲವಾಗಿ ಕಾಮಗಾರಿಗಳಲ್ಲಿ ನಮಗೆ ಮೀಸಲಾತಿ ಕೊಟ್ಟಿದೆ. ಇದಕ್ಕೆ ಸಹಕಾರ ಕೊಟ್ಟಿದ್ದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಆದರೂ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅಸಡ್ಡೆಯಿಂದ ಪರಿಣಾಮಕಾರಿಯಾಗಿ ಮೀಸಲಾತಿ ಸೌಲಭ್ಯ ಸಿಗದಂತಾಗಿದೆ.

| ಎಚ್​.ಟಿ.ರಾಘವೇಂದ್ರ. ರಾಜ್ಯ ಹಿಂದುಳಿದ ವರ್ಗಗಳ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net