

ಮೈಸೂರು: ಪ್ರೀತಿಸುತ್ತಿದ್ದ ಯುವಕ-ಯುವತಿಯನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬಲ್ಲಿ ಈ ಪ್ರಕರಣ ನಡೆದಿದೆ.
ಯುವತಿಯೊಬ್ಬಳು ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಆರೋಪದಲ್ಲಿ ಗ್ರಾಮಸ್ಥರು ಈ ಕೃತ್ಯ ಎಸಗಿದ್ದಾರೆ. ನಿನ್ನೆ ರಾತ್ರಿಯಿಂದಲೂ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ, ಮನ ಬಂದಂತೆ ಥಳಿಸಿ ಹಲ್ಲೆ ನಡೆಸಲಾಗಿದೆ.
ಹೆಮ್ಮರಗಾಲದ ಮಹಿಳೆ ಹಾಗೂ ನೇರಳೆ ಗ್ರಾಮದ ಪುರುಷ ಹಲ್ಲೆಗೊಳಗಾಗಿರುವವರು. ಇಬ್ಬರ ನಡುವೆ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಮಹಿಳೆ ಮನೆಗೆ ಪುರುಷ ಬಂದಾಗ ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.
ಇಬ್ಬರನ್ನೂ ಗ್ರಾಮದ ನಡುಬೀದಿಯ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಲ್ಲದೆ, ಅನ್ನ-ನೀರು ಕೊಡದೆ ಸತಾಯಿಸಲಾಗಿದೆ. ಗಂಟೆಗಟ್ಟಲೆ ಇಬ್ಬರನ್ನೂ ಕಟ್ಟಿ ಹಾಕಲಾಗಿದ್ದರೂ ಇದು ಇನ್ನೂ ಪೊಲೀಸರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.