

| ಶೇಖರ್ ಸಂಕೋಡನಹಳ್ಳಿ ಅರಸೀಕೆರೆ
ತಾಲೂಕಿನ ಮುದುಡಿ ಗ್ರಾಮದ 40 ಚದರ ಕಿ.ಮೀ. ಸರಹದ್ದಿನಲ್ಲಿ ಚಿನ್ನದ ಅದಿರು ತೆಗೆಯುವ ಸಂಬಂಧ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅರ್ಹ ಕಂಪನಿಗಳಿಗೆ ಸಂಯೋಜಿತ ಪರವಾನಗಿ ನೀಡಲು ಡಿ.30ರಂದು ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಜಿಲ್ಲೆಯ ಮೊದಲ ಎಜಿಎಫ್ (ಅರಸೀಕೆರೆ ಗೋಲ್ಡ್ ಫ್ಯಾಕ್ಟರಿ) ಪ್ರಾರಂಭಗೊಳ್ಳುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ತಾಲೂಕಿನ ಮುದುಡಿ ಗ್ರಾಮ, ಹಾವೇರಿ ಜಿಲ್ಲೆಯ ಕಾಕೋಳ್, ಸೇವಾನಗರ, ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟಿ, ಕಟ್ಟನಹಟ್ಟಿ, ಧಾರವಾಡ ಜಿಲ್ಲೆಯ ಮಾರುತಿಪುರ, ಬಳ್ಳಾರಿ ಜಿಲ್ಲೆಯ ಕಣಿವೆಹಳ್ಳಿ ಗ್ರಾಮ ಸೇರಿದಂತೆ 7 ಜಿಲ್ಲೆಗಳ ಆಯಕಟ್ಟಿನ ಗ್ರಾಮಗಳ ಸರಹದ್ದಿನಲ್ಲಿ ಸರ್ವೆ ನಡೆಸಲಾಗಿತ್ತು. ಇದೀಗ ಪ್ರಕ್ರಿಯೆ ಪೂರ್ಣಗೊಂಡು ಟೆಂಡರ್ ಕೂಡ ನಡೆದಿದೆ.
ಘೊಷಿತ ಮುದುಡಿ ಗ್ರಾಮದ ಆಸುಪಾಸಿನ 40 ಚ.ಕಿ.ಮೀ. ವ್ಯಾಪ್ತಿಯ ಸಿದ್ದಾಪುರ, ಬಿಸಲೇಹಳ್ಳಿ, ಮುದುಡಿ ತಾಂಡ್ಯ, ಹಲಗೇನಹಳ್ಳಿ, ವೆಂಕಟಾಪುರ ಕಾವಲು, ಶಂಕರಪುರ, ಬೋರೆಹಳ್ಳಿ, ಪುಣ್ಯ ಕ್ಷೇತ್ರ ಗಂಗೆಮಡು ಸೇರಿ ಅಂದಾಜು 9500 ಎಕರೆಯಲ್ಲಿ ಬೃಹತ್ ಗಣಿಗಾರಿಕೆ ತಲೆ ಎತ್ತಲಿದೆ. ಇದರಿಂದ ಒಕ್ಕಲುತನವನ್ನೇ ನಂಬಿರುವ ಸಾವಿರಾರು ರೈತ ಕುಟುಂಬಗಳು ಅತಂತ್ರವಾಗಲಿವೆ. ರೈಲ್ವೆ ಮಾರ್ಗ, ಎತ್ತಿನಹೊಳೆ ನಾಲೆ ನಿರ್ಮಾಣ ಕಾಮಗಾರಿ, ಅನಿಲ ಪೂರೈಕೆ ಕೊಳವೆ ಮಾರ್ಗ, ಹೈಟೆನ್ಷನ್ ವಿದ್ಯುತ್ ಮಾರ್ಗ ಸೇರಿ ಹಲವು ಯೋಜನೆಗಳಿಗೆ ಈಗಾಗಲೆ ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ನೈಸರ್ಗಿಕ ಸಂಪತ್ತಿನ ತಾಣವಾಗಿರುವ ಭೂ ಪ್ರದೇಶದಲ್ಲಿ ಚಿನ್ನದ ಅದಿರಿನ ಬೇಟೆಗೆ ಸರ್ಕಾರ ಮುಂದಾಗಿದ್ದು ಘೊಷಿತ ಮೀಸಲು ಪ್ರದೇಶದಲ್ಲಿ ಚಿನ್ನದ ಅದಿರಿನ ಗಣಿಗಾರಿಕೆ ಆರಂಭಗೊಂಡಲ್ಲಿ ಅಪಾರ ಸಸ್ಯ, ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ಧಕ್ಕೆ ಎದುರಾಗುವ ಅಪಾಯವಿದೆ. ಸಣ್ಣ ಪುಟ್ಟ ಕೆರೆಕಟ್ಟೆ, ಗುಡ್ಡ, ಕುರುಚಲು ಕಾಡಿನ ಜತೆಗೆ ಸಾವಿರಾರು ಎಕರೆ ಸಮೃದ್ಧ ಕೃಷಿ ಭೂಮಿ ಇತಿಹಾಸದ ಪುಟ ಸೇರುವುದರಲ್ಲಿ ಸಂದೇಹವಿಲ್ಲ ಎನ್ನಲಾಗುತ್ತಿದೆ.
ಸೆ.20ರ ‘ವಿಜಯವಾಣಿ’ ಸಂಚಿಕೆಯಲ್ಲಿ ‘ಚಿನ್ನದ ಅದಿರಿನ ಬೇಟೆಗೆ ಸಿದ್ಧತೆ’ ಶೀರ್ಷಿಕೆ ಅಡಿ ಸಮೀಕ್ಷಾ ಕಾರ್ಯದ ಕುರಿತು ಸಮಗ್ರ ವರದಿ ಪ್ರಕಟಿಸಿ ಗಮನಸೆಳೆಯಲಾಗಿತ್ತು.
ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚಿನ್ನದ ಅದಿರು ಹೊರತೆಗೆಯುವ ಸಂಬಂಧ ಅರ್ಹ ಕಂಪನಿಗಳಿಗೆ ಪರವಾನಗಿ ನೀಡಲು ಟೆಂಡರ್ ಆಹ್ವಾನಿಸಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ ಸೇರಿ ಯಾವುದೇ ಬಗೆಯ ನಿಕ್ಷೇಪಗಳನ್ನು ಹೊರತೆಗೆ ಯುವಿಕೆಯಂತಹ ಚಟುವಟಿಕೆಗಳನ್ನು ಇಂಡಿಯನ್ ಬ್ಯೂರೋ ಆಫ್ ಮೈನಿಂಗ್ ಸಂಸ್ಥೆ ನಿರ್ವಹಿಸಲಿದೆ. ಇಡೀ ಪ್ರಕ್ರಿಯೆ ಇನ್ನಷ್ಟು ಕಾಲಾವಕಾಶ ತೆಗೆದುಕೊಳ್ಳಲಿದೆ. | ನಾಗರಾಜ್ ಹಿರಿಯ ಭೂವಿಜ್ಞಾನಿ, ಹಾಸನ ಚಿನ್ನದ ಅದಿರು ನಿಕ್ಷೇಪ ಹೊರ ತೆಗೆಯುವ ಸಂಬಂಧ ರಾಜ್ಯ ಸರ್ಕಾರದ ವತಿಯಿಂದ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಧಕ-ಬಾಧಕಗಳನ್ನು ಅವಲೋಕಿಸದೆ ಪ್ರಕ್ರಿಯೆ ಕೈಗೆತ್ತಿಕೊಂಡರೆ ಹೋರಾಟ ಅನಿವಾರ್ಯ. | ಕನಕಂಚೇನಹಳ್ಳಿ ಪ್ರಸನ್ನಕುಮಾರ್ ರೈತಸಂಘದ ರಾಜ್ಯ ಸಂಚಾಲಕ, ಅರಸೀಕೆರೆ