

ಬಾಗಲಕೋಟೆ: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಎದುರೇ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಮಾಜಿ ಸಿಎಂ ವಿರುದ್ದ ಅಸಮಧಾನ ಹೊರಹಾಕಿದ ಘಟನೆ ಬಾಗಲಕೋಟೆಯ ಬಾದಾಮಿಯಲ್ಲಿ ನಡೆದಿದೆ. ಸಿದ್ದರಾಮಯ್ಯ ನಮ್ಮೂರಿಗೆ ಬಂದು ಹೋದರು ಆದರೂ ನಮ್ಮೂರಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಸದಸ್ಯ ದೂರಿದ್ದು, ತಕ್ಷಣವೇ ಸಿದ್ದರಾಮಯ್ಯನವರು ಆತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಜಿಲ್ಲೆಯ ಬಾದಮಿ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತರ ಸದಸ್ಯರ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಸಮಯದಲ್ಲಿ ಮಾತನಾಡಲು ವೇದಿಕೆ ಹತ್ತಿದ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ವ್ಯಕ್ತಿ ಸಂಗಣ್ಣ ಜಾಬಣ್ಣವರ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯಾರೂ ಸಹ ಹಳ್ಳಿ ಕಡೆಗೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿ ಹೋಗಿವೆ. ಸಿದ್ದಾರಾಮಯ್ಯ ಬಂದು ಹೋದ್ರು, ಆದರೂ ಕಾಮಗಾರಿ ಸರಿಯಾಗಿಲ್ಲ." ಎಂದು ಸಂಗಣ್ಣ ಮೈಕ್ ಹಿಡಿದು ಹೇಳಿದ್ದಾರೆ.
ಸಂಗಣ್ಣ ಜಾಬಣ್ಣವರ್ ಮಾತು ಕೇಳಿ ಸಿದ್ದರಾಮಯ್ಯನವರು ಸಿಟ್ಟಾಗಿದ್ದು, ಕುಳಿತಿದ್ದ ಆಸನದಿಂದ ಎದ್ದು ಬಂದು ಆತನ ಮಾತು ತಡೆದು ಡಯಾಸನಿಂದ ಕೆಳಗೆ ಕಳಿಸಿದ್ದಾರೆ. ವೇದಿಕೆಯಿಂದ ಕೆಳಕ್ಕೆ ಸದಸ್ಯನನ್ನು ನೂಕಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಂಗಣ್ಣ ಅವರನ್ನ ಸಮಾಧಾನಿಸಲು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮುಂದಾಗಿದ್ದರು. ಸಭೆಯಲ್ಲಿ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಎಂಎಲ್ಸಿ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿ ಹಲವರು ಭಾಗವಹಿಸಿದ್ದರು.