

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಮತ್ತು ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಸರ್ಕಾರವು ಆದ್ಯತೆ ನೀಡಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್’ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಎಜುಕೇಷನ್ ಎಕ್ಸ್ಪೋ’ಗೆ ಶನಿವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಐಟಿ ಸಿಟಿ, ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಬೆಂಗಳೂರು ದಶಕಗಳ ಹಿಂದಿನಿಂದಲೂ ‘ಎಜುಕೇಷನ್ ಹಬ್’ ಆಗಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳ ವ್ಯಾಸಂಗಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ, ಮೈಸೂರು, ಮಂಗಳೂರು ಸೇರಿ ಇತರೆ ನಗರಗಳಲ್ಲಿಯೂ ಉತ್ತಮ ಶಿಕ್ಷಣ ಸಂಸ್ಥೆಗಳಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ರಾಜ್ಯಕ್ಕೆ ನಮ್ಮ ಸರ್ಕಾರ ಕೂಡ ಹೆಚ್ಚಿನ ಮಹತ್ವ ನೀಡಲಿದೆ ಎಂದರು.
ಪ್ರತಿ ವರ್ಷ ಎಜುಕೇಷನ್ ಎಕ್ಸ್ ಪೋ ಆಯೋಜಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ವಿಜಯವಾಣಿ ಕಾರ್ಯನಿರ್ವಹಿಸುತ್ತಿದೆ. ಒಂದೇ ವೇದಿಕೆಯಲ್ಲಿ 65ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮಾಹಿತಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅನುಕೂಲವಾಗಲಿದೆ. ಕೋರ್ಸ್, ಶುಲ್ಕ, ಕಾಲೇಜಿನಲ್ಲಿರುವ ಮೂಲಸೌಕರ್ಯ ಇನ್ನಿತರ ಮಾಹಿತಿಗಳು ಒಂದೇ ಕಡೆ ದೊರೆಯಲಿವೆ. ಈ ಎಕ್ಸ್ ಪೋ ಬಹಳ ಅರ್ಥಪೂರ್ಣ ಎಂದು ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಎಜುಕೇಷನ್ ಎಕ್ಸ್ ಪೋ ಆಯೋಜಿಸುವುದರಿಂದ ಪಿಯುಸಿ ಮುಗಿಸಿರುವ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಉನ್ನತ ಶಿಕ್ಷಣದಲ್ಲಿ ಏನು ಮಾಡಬೇಕೆಂದು ಹೆಚ್ಚಿನ ಮಾಹಿತಿ ಇಲ್ಲದವರಿಗೆ ಮತ್ತು ಗೊಂದಲದಲ್ಲಿರುವವರಿಗೆ ಎಕ್ಸ್ಪೋ ಉತ್ತಮ ಮಾಹಿತಿ ನೀಡಲು ಸಹಕಾರಿಯಾಗಲಿದೆ. ಪಿಯುಸಿಯಿಂದ ವೈದ್ಯಕೀಯ ಕೋರ್ಸ್ವರೆಗಿನ ಎಲ್ಲ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡುತ್ತಿರುವುದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಆರ್ಎಲ್ ಸಂಸ್ಥೆಯ ಉಪಾಧ್ಯಕ್ಷ ಅರುಣ್, ಆಡಳಿತಾಧಿಕಾರಿ ಶೋಭಾ, ಎಂ.ಎಸ್. ರಾಮಯ್ಯ ಕಾಲೇಜಿನ ಸಮರ್ಥ ನಾಗಭೂಷಣ್ ಸೇರಿ ಇತರ ಗಣ್ಯರು ಉಪಸ್ಥಿತರಿದ್ದರು.
ರಾಜ್ಯದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಳೆದ 10 ವರ್ಷಗಳಿಂದ ಎಜುಕೇಷನ್ ಎಕ್ಸ್ ಪೋ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರ ಜತೆಗೆ ಪ್ರಾಪರ್ಟಿ ಎಕ್ಸ್ ಪೋ ಮತ್ತು ರೈತರಿಗೆ ಅನುಕೂಲವಾಗುವ ಕೃಷಿ ಮೇಳವನ್ನೂ ಸಂಸ್ಥೆ ಆಯೋಜಿಸುತ್ತಿದೆ.| ಕೆ.ಎನ್. ಚನ್ನೇಗೌಡ, ಸಂಪಾದಕ, ವಿಜಯವಾಣಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹತ್ತಾರು ಕಾಲೇಜುಗಳನ್ನು ಸುತ್ತಿ ಕೋರ್ಸ್ಗಳು, ಶುಲ್ಕ, ಮೂಲಸೌಕರ್ಯ, ಪ್ಲೇಸ್ಮೆಂಟ್ ಸೌಲಭ್ಯ ಕೇಳಲು ಸಾಕಷ್ಟು ಪರದಾಡಬೇಕಾಗುತ್ತದೆ. ಅಂತಹ ಎಲ್ಲ ಮಾಹಿತಿ ಒಂದೇ ಸೂರಿನಡಿ ಕಲ್ಪಿಸಿರುವುದು ತುಂಬಾ ಅನುಕೂಲವಾಗಿದೆ.| ಮೇಘಾ ಶೆಟ್ಟಿ, ನಟಿ