ಪೊಲೀಸರ ಋಣ ತೀರಿಸಿದ ಗ್ರಾಮ ಪಂಚಾಯಿತಿಯ ನೂತನ ಸದಸ್ಯ?

PSI
Published on

ವಿಜಯಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯನೊಬ್ಬ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಹಾಗೂ ಓರ್ವ ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿರುವ ಘಟನೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಸದಸ್ಯನ ಸನ್ಮಾನಕ್ಕೆ ಪ್ರತಿಯಾಗಿ ಪಿಎಸ್​ಐ ಸಹ ಸಿಹಿ ತಿನ್ನಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಋಣ ತೀರಿಸಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಘಟನೆಯ ವಿವರಣೆಗೆ ಬರುವುದಾರೆ, ತಾಳಿಕೋಟ ತಾಲೂಕಿನ ಬಳವಾಟ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಸನಗೌಡ ಸಾಸನೂರ ಎಂಬುವರು ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್ಐ ಗಂಗೂಬಾಯಿ ಬಿರಾದಾರಗೆ ಠಾಣೆಯಲ್ಲಿ ನೂತನ ಸದಸ್ಯ ತಮ್ಮ ಬೆಂಬಲಿಗರೊಂದಿಗೆ ಸನ್ಮಾನ ಮಾಡಿದರು. ಅಲ್ಲದೆ, ಠಾಣೆಯ ಎದುರು ಪೊಲೀಸ್ ಕಾನ್ಸಟೇಬಲ್ ಶಿವನಗೌಡ ಬಿರಾದಾರಗೂ ಸನ್ಮಾನ ಮಾಡಿದ್ದಾರೆ.

ಇದಾದ ಬಳಿಕ ಸನ್ಮಾನದ ಫೋಟೋಗಳನ್ನು ಬಸವರಾಜ ಭಜಂತ್ರಿ‌ ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪಿಎಸ್ಐ ಜಿ. ಜಿ. ಬಿರಾದಾರ ಮೇಡಂ ಹಾಗೂ ನಮ್ಮೂರ ಹಿತೈಷಿ ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರರನ್ನು ಭೇಟಿಯಾಗಿ ಚುನಾವಣೆ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ‌ ಮಾಡಲಾಯಿತು ಎಂದು ಫೇಸ್​ಬುಕ್​ನಲ್ಲಿ ಬರೆದು, ಸಂತಸ ವ್ಯಕ್ತಪಡಿಸಲಾಗಿದೆ.

ಈ ವಿಚಾರ ಅನಗತ್ಯವಾಗಿ ವಿವಾದಕ್ಕೆ ಎಡೆಮಾಡಿಕೊಡಲಿದೆ ಹಾಗೂ ಪೊಲೀಸ್​ ಸಿಬ್ಬಂದಿಗೆ ತೊಂದರೆ ತಂದೊಡ್ಡಲಿದೆ ಎಂಬ ತಪ್ಪಿನ ಅರಿವಾಗುತ್ತಿದ್ದಂತೆ ಫೋಟೋಗಳನ್ನು‌ ಫೇಸ್​ಬುಕ್​ನಿಂದ ಡಿಲೀಟ್ ಮಾಡಲಾಗಿದೆ. ಆದರೆ, ಅಷ್ಟರಲ್ಲಾಗಲೇ ಫೇಸ್​ಬುಕ್ ಪೋಸ್ಟ್ ಸ್ಕ್ರೀನ್​ಶಾಟ್​ಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net