ವಿಜಯಾನಂದ ಚಿತ್ರದ ಆಡಿಷನ್​ಗೆ ಅದ್ಭುತ ಸ್ಪಂದನೆ; ಸಹಸ್ರಾರು ಕಲಾವಿದರು ಭಾಗಿ, ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಮನ್ನಣೆ..

Vijayananda In
ಹುಬ್ಬಳ್ಳಿಯಲ್ಲಿ ವಿಜಯಾನಂದ ಚಲನಚಿತ್ರಕ್ಕಾಗಿ ಶನಿವಾರ ಕಲಾವಿದರ ಆಡಿಷನ್ ನಡೆಸಿದ ಆಯ್ಕೆ ತಂಡದೊಂದಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ನಿರ್ದೇಶಕಿ ರಿಷಿಕಾ ಶರ್ಮಾ, ನಾಯಕ ನಟ ನಿಹಾಲ್, ಪ್ರೊಡಕ್ಷನ್ ಹೆಡ್ ಪ್ರಭು ಮೇಟಿಮಠ, ಕ್ರಿಯೇಟಿವ್ ಹೆಡ್ ಹೇಮಂತ, ವಿಆರ್​ಎಲ್ ಮೀಡಿಯಾ ಜನರಲ್ ಮ್ಯಾನೇಜರ್ ಶಿವಾಜಿ ಭಿಸೆ ಇತರರು.
Published on

ಹುಬ್ಬಳ್ಳಿ: ಸಾರಿಗೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ. ವಿಜಯ ಸಂಕೇಶ್ವರ ಅವರ ಬದುಕಿನ ಕಥೆ ಹಲವರಿಗೆ ಸ್ಪೂರ್ತಿ ನೀಡುವಂಥದ್ದು. ಅವರ ಜೀವನಗಾಥೆಯನ್ನು ‘ವಿಜಯಾನಂದ’ ಚಲನಚಿತ್ರದ ಮೂಲಕ ಬೆಳ್ಳಿ ಪರದೆಗೆ ತರಲು ಭರ್ಜರಿ ಸಿದ್ಧತೆ ನಡೆದಿದೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಸವಾಯಿ ಗಂಧರ್ವ ಭವನದಲ್ಲಿ ಶನಿವಾರ ಏರ್ಪಡಿಸಿದ ಆಡಿಷನ್​ಗೆ ಕಲಾವಿದರ ದಂಡು ಸಹಸ್ರಾರು ಸಂಖ್ಯೆಯಲ್ಲಿ ಹರಿದುಬರುವ ಮೂಲಕ ಅದ್ಭುತ ಸ್ಪಂದನೆ ವ್ಯಕ್ತವಾಯಿತು.

ಪುರುಷರು, ಮಹಿಳೆಯರು, ಮಕ್ಕಳು ಸೇರಿ 5ರಿಂದ 70 ವರ್ಷದವರೆಗಿನ ಕಲಾವಿದರು ಆಡಿಷನ್​ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ರಾತ್ರಿಯವರೆಗೂ ಇದು ಮುಂದುವರಿಯಿತು. ಸಿನಿಮಾದಲ್ಲಿ ನಟಿಸುವ ಆಕಾಂಕ್ಷೆ ಹೊತ್ತ 3500ಕ್ಕೂ ಹೆಚ್ಚು ಕಲಾವಿದರು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕರ್ನಾಟಕ ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯಗಳಿಂದಲೂ ಕಲಾವಿದರು ಆಗಮಿಸಿ ಆಡಿಷನ್​ನಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ದಿಸೆಯಲ್ಲಿ ಆಯೋಜಿಸಿದ್ದ ಆಡಿಷನ್​ನಲ್ಲಿ ಸಾವಿರಾರು ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಡೈಲಾಗ್ ಹೇಳಿದರು. ಹಾಡು ಹಾಡಿದರು. ಏಕಪಾತ್ರಾಭಿನಯ, ಮಿಮಿಕ್ರಿ ಮಾಡಿದರು. ವಿವಿಧ ರೀತಿಯಲ್ಲಿ ತಮ್ಮ ಕಲಾ ಪ್ರತಿಭೆಯನ್ನು ತೋರುವ ಮೂಲಕ ಆಯ್ಕೆ ತಂಡದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಲಾಕ್​ಡೌನ್​ನಿಂದ ಮನೆಯಲ್ಲೇ ಇರಬೇಕಾದ ಸಂಕಷ್ಟದ ಪರಿಸ್ಥಿತಿ ಎದುರಿಸಿದ ಹಲವು ರಂಗ ಕಲಾವಿದರು ಕೂಡ ಈ ವೇದಿಕೆಯನ್ನು ಬಳಸಿಕೊಂಡರು. ಉತ್ತರ ಕರ್ನಾಟಕದವರೇ ಆದ ನಾಯಕ ನಟ ನಿಹಾಲ್ ಅವರು ಡಾ.ವಿಜಯ ಸಂಕೇಶ್ವರ ಅವರ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.

ವಿಜಯ ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸುತ್ತಿದ್ದು, ಇತ್ತೀಚೆಗೆ ಅನಂತ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಟೀಸರ್ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ, ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಅತೀ ಶೀಘ್ರದಲ್ಲೇ ಚಿತ್ರೀಕರಣವೂ ಆರಂಭವಾಗಲಿದೆ.

ಆನಂದ ಸಂಕೇಶ್ವರ ಸಾಥ್

ವಿಆರ್​ಎಲ್ ಫಿಲ್ಮ್ ಪ್ರೊಡಕ್ಷನ್ ಮಾಲೀಕರು, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೂ ಆದ ಆನಂದ ಸಂಕೇಶ್ವರ ಅವರು ಆಡಿಷನ್ ಸ್ಥಳಕ್ಕೆ ಭೇಟಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಲಾವಿದರೊಂದಿಗೆ ಬೆರೆತರು. ಕಲಾವಿದರು ತೋರಿದ ಪ್ರದರ್ಶನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಹಲವು ಕಲಾವಿದರು ಅವರೊಂದಿಗೆ ಸೆಲ್ಪೀ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಸಂಕೇಶ್ವರ ಅವರು, ‘ವಿಜಯಾನಂದ’ ಚಿತ್ರವನ್ನು ಈ ಭಾಗದಲ್ಲೇ ಚಿತ್ರೀಕರಣ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲಾವಿದರ ಆಯ್ಕೆಗೆ ಆಡಿಷನ್ ನಡೆಸಲಾಗಿದೆ. ಕರ್ನಾಟಕ ಮಾತ್ರವಲ್ಲ ಗೋವಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದಲೂ ಕಲಾವಿದರು ಆಡಿಷನ್​ಗೆ ಬಂದಿದ್ದಾರೆ. ಎಲ್ಲರ ಆಶೀರ್ವಾದ ಈ ಚಿತ್ರಕ್ಕೆ ಇರಲಿ ಎಂದು ಆಶಿಸಿದರು.

ರಿಷಿಕಾ ಶರ್ಮಾ ನೇತೃತ್ವ: ನಾಯಕ ನಟ ನಿಹಾಲ್ ಮತ್ತು ನಿರ್ದೇಶಕಿ ರಿಷಿಕಾ ಶಮಾ ಅವರು ಕ್ಯಾಮರಾಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಡಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಕಲಾವಿದರು ಹಾಗೂ ಆಸಕ್ತರು ಸರದಿಯಲ್ಲಿ ಬಂದು ಪ್ರತಿಭಾ ಪ್ರದರ್ಶನ ಮಾಡಿದರು. ಕರೊನಾ ನಿಯಮಾವಳಿಗಳನ್ನು ಪಾಲಿಸಿ, ರಿಷಿಕಾ ಶರ್ಮಾ ನೇತೃತ್ವದ ಚಿತ್ರತಂಡವು ಅಚ್ಚುಕಟ್ಟಾಗಿ ಆಡಿಷನ್ ನಡೆಸಿತು.

ಈ ನೆಲದ ಭಾಷೆ ಚಿತ್ರದಲ್ಲಿ ಹೊರಹೊಮ್ಮಬೇಕು ಎಂಬುದು ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರ ಅಭಿಲಾಷೆಯಾಗಿದೆ. ಇದಕ್ಕಾಗಿ ಹುಬ್ಬಳ್ಳಿ ಯಲ್ಲಿ ನಡೆಸಿದ ಆಡಿಷನ್​ಗೆ ಇಷ್ಟು ದೊಡ್ಡ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ. ನಿರೀಕ್ಷೆಗೂ ಮೀರಿ ಅಪಾರ ಸಂಖ್ಯೆಯಲ್ಲಿ ಕಲಾವಿದರು ಆಗಮಿಸಿದ್ದರು. ಇವರನ್ನೆಲ್ಲ ನೋಡಿದರೆ ರಂಗಭೂಮಿ ಇಲ್ಲಿ ಇನ್ನೂ ಉಳಿದಿದೆ ಎನಿಸುತ್ತದೆ. ಒಬ್ಬರಿಗಿಂತ ಒಬ್ಬರು ಉತ್ತಮ ಕಲಾವಿದರು, ಆಡಿಷನ್ ಮಾಡಿದ್ದು ಬಹಳ ಖುಷಿ ತಂದಿದೆ.| ರಿಷಿಕಾ ಶರ್ಮಾ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net