ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಸಹಕಾರಿಗಳು : ಸವಣೂರು ಸೀತಾರಾಮ್ ರೈ ಬಣ್ಣನೆ

New Project (6)
Published on

ಬೆಳ್ತಂಗಡಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆರಂಭವಾದ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಿಶಿಷ್ಟ ಕಾರ್ಯಕ್ಷಮತೆಯ ಅರ್ಹತೆಯಿಂದ ಪ್ರಶಸ್ತಿ ಪಡೆದಿರುವುದು ಪ್ರಶಂಸನೀಯ. ಸಹಕಾರಿ ಕ್ಷೇತ್ರ ಬಡ ಜನತೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ್ ರೈ ಹೇಳಿದರು.

ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 2024ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ಪಡೆದ ಪ್ರಯುಕ್ತ ಬುಧವಾರ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಹಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಿರೀಕ್ಷೆಗೂ ಮೀರಿ ಬೆಳೆದ ನಮ್ಮ ಸಂಘ ಶೇಕಡವಾರು ಉತ್ತಮ ಬೆಳವಣಿಗೆ ಹೊಂದಿದೆ. 33,000 ಸದಸ್ಯರು 210 ಕೋಟಿ ರೂ. ಠೇವಣಿ ಹೊಂದಿದ್ದು, 194 ಕೋಟಿ ರೂ. ಸಾಲ ನೀಡಿದೆ. 19 ಶಾಖೆ ಹೊಂದಿರುವ ಸಂಘದಲ್ಲಿ 90ಕ್ಕಿಂತ ಅಧಿಕ ಸಿಬ್ಬಂದಿಯಿದ್ದಾರೆ. ಸಂಘದ ಸಿಬ್ಬಂದಿ 30ರ ಆಸುಪಾಸಿನ ಯುವಜನತೆಯಾಗಿದ್ದು ಇವರ ಕಾರ್ಯಕ್ಷಮತೆ, ದೃಢ ನಿರ್ಧಾರದಿಂದ ಉತ್ತಮ ಫಲಿತಾಂಶ ನೀಡುತ್ತಿದೆ. ಗ್ರಾಹಕರಿಗೆ ಇನ್ನಷ್ಟು ಉತ್ಕೃಷ್ಟ ಸೇವೆ ನೀಡುವ ಮೂಲಕ ಸಂಘವನ್ನು ಅತ್ಯುತ್ತಮವಾಗಿ ಪರಿವರ್ತಿಸುವ ವಿಶ್ವಾಸವಿದೆ ಎಂದರು.

ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘದ ಪ್ರಗತಿಗೆ ಸಮರ್ಥ ಆಡಳಿತ ಮಂಡಳಿ, ಪ್ರಾಮಾಣಿಕ ಸಿಬ್ಬಂದಿ ಹಾಗೂ ಸದಸ್ಯರ ಭರವಸೆಯೇ ಕಾರಣ ಎಂದರು.

ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಡಾ.ಬಿ.ಎ.ಪ್ರಾಂಶುಪಾಲ ಕುಮಾರ್ ಹೆಗ್ಡೆ ಸಂಘದ ಡೈರಿ ಬಿಡುಗಡೆಗೊಳಿಸಿ ಮಾತನಾಡಿ, ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಾಧನೆಯನ್ನು ಸಂಘ ಮಾಡಿದೆ. ಸಹಕಾರಿ ಸಂಘಗಳು ಸ್ಥಳೀಯ ಜನರಿಗೆ ನೆರವು ನೀಡುವ ಮೂಲಕ ದೇಶಸೇವೆ ಮಾಡುತ್ತಿವೆ ಎಂದರು.

ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಬಿ, ಸೊಸೈಟಿಯ ಉಪಾಧ್ಯಕ್ಷ ಎಂ.ಜಿ.ಶೆಟ್ಟಿ, ಸಿಇಒ ಸುಜಯ್ ಶೆಟ್ಟಿ,ನಿರ್ದೇಶಕರಾದ ಬಿ.ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಎಚ್, ಜಯಂತ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಬಿ.ನಾರಾಯಣ ಶೆಟ್ಟಿ, ಕೃಷ್ಣ ರೈ ಟಿ, ರಘುರಾಮ ಶೆಟ್ಟಿ ಎ, ಕೆ.ಸದಾಶಿವ ಶೆಟ್ಟಿ, ಅಂಬಾ ಬಿ.ಆಳ್ವ, ಪುರಂದರ ಶೆಟ್ಟಿ, ಜಯರಾಮ ಭಂಡಾರಿ ಎಂ, ಮಂಜುನಾಥ ರೈ, ಸಾರಿಕಾ ಶೆಟ್ಟಿ, ಸೊಸೈಟಿಯ ಗ್ರಾಹಕರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ನಿರ್ದೇಶಕ ರಘುರಾಮ ಶೆಟ್ಟಿ ಎ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net