

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನ ಎಷ್ಟು ಪ್ರಸಿದ್ಧಿ ಎಂದು ಹೇಳಬೇಕಿಲ್ಲ. ಪ್ರತಿ ಶನಿವಾರದಂದು ದೇಗುಲದಲ್ಲಿ ಸಾಕಷ್ಟು ಮಂದಿ ಭಕ್ತರು ಆಂಜನೇಯನ ದರ್ಶನ ಪಡೆಯುತ್ತಾರೆ. ಹಲವರು ದೇವಾಲಯದ ಅಭಿವೃದ್ಧಿಗಾಗಿ ದೇಣಿಗೆ ನೀಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಭಕ್ತರು ಈ ವಿಡಿಯೋ(Video) ನೋಡಿದರೆ ದೇಣಿಗೆ ನೀಡಿ ತಪ್ಪು ಮಾಡಿದೇವು ಎಂದು ಹೇಳುವುದು ಸುಳ್ಳಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ ದೇಣಿಗೆ ಹಣವನ್ನು ಕಳ್ಳತನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ದೇಣಿಗೆಗಳನ್ನು ಎಣಿಸುವ ಒಬ್ಬರು ಕುಳಿತಿರುವ ಮತ್ತೊಬ್ಬ ವ್ಯಕ್ತಿಗೆ ಹಣದ ಬಂಡಲ್ ಅನ್ನು ಹಸ್ತಾಂತರಿಸುವುದನ್ನು ವಿಡಿಯೋ ಬಹಿರಂಗಪಡಿಸುತ್ತದೆ. ಹುಂಡಿ ಎಣಿಕೆ ಮಾಡಲು ಚಾಪೆ ಮೇಲೆ ರಾಶಿ ರಾಶಿ ನಾಣ್ಯ ಸುರಿಯಲಾಗಿದೆ. ಎಣಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರವು ವ್ಯಕ್ತಿಯೇ ಹಣವನ್ನು ಕದ್ದು ತನ್ನ ಪ್ಯಾಕೆಟ್ಗೆ ಇಳಿಸಿದ್ದಾನೆ. ನೋಡ ನೋಡ್ತಿದ್ದಂತೆಯೇ ಟೇಬಲ್ ಮೇಲಿರುವ ಕಂತೆ ಕಂತೆ ಹಣ ಮಾಯವಾಗುತ್ತೆ. ದೇವಸ್ಥಾನ ಸಿಬ್ಬಂದಿಯಿಂದಲೇ ಹುಂಡಿ ಹಣಕ್ಕೆ ಉಂಡೆನಾಮ ಹಾಕಲಾಗಿದೆ.
ಪ್ರಧಾನ ಅರ್ಚಕರು ಇದು ಹಳೆಯ ಕ್ಲಿಪ್ ಎಂದು ಹೇಳಿದ್ದಾರೆ. ಅದೇನೆ ಇರಲಿ ಸಿಸಿಟಿವಿ ಕಣ್ಗಾವಲಿದ್ದರೂ ಲೆಕ್ಕಿಸದೇ ದೇವರ ದುಡ್ಡಿಗೆ ಕನ್ನ ಹಾಕುತ್ತಾರೆ ಎಂದರೆ ನೀವೇ ಯೋಚನೆ ಮಾಡಿ. ಬೇಲಿಯೇ ಎದ್ದು ಹೊಲ ಮೆಯ್ದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವವರೆ ಕಳ್ಳರೆಂದರೆ ದೇಗುಲದ ಹಣಕ್ಕೆ ಭದ್ರತೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ನನ್ನ ಕುಟುಂಬದ ಸದಸ್ಯರು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಆಂಜನೇಯ ಸ್ವಾಮಿಯಿಂದ ಪಡೆದ ಕೃಪೆಗಾಗಿ ಭಕ್ತಿ ಮತ್ತು ಕೃತಜ್ಞತೆಯಿಂದ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಕೆಲಸ ಮಾಡುವವರು ಭಕ್ತರು ನೀಡುವ ಕಾಣಿಕೆಯನ್ನು ಕದಿಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈ ವಿಡಿಯೋ ಸಾಕಷ್ಟು ಆಘಾತಕಾರಿಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಭಕ್ತರೊಬ್ಬರು ಹೇಳಿದ್ದಾರೆ.