

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಿಂದ ಬೇರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೇಲ್ಸೇತುಗಳಲ್ಲಿ ಒಂದಾದ ಪೀಣ್ಯ ಫ್ಲೈಓವರ್ ಜನವರಿ 16ರ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11ವರೆಗೆ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪೀಣ್ಯ ಮೇಲ್ಸೇತುವೆ ಕಾಮಗಾರಿಯಲ್ಲಿ ಲೋಪ ಕಂಡುಬಂದಿದ್ದು, ಹೆಚ್ಚುವರಿ ಕಾಮಗಾರಿ ನಡೆಸಲಾಗಿದೆ. ಲೋಡ್ ಟೆಸ್ಟಿಂಗ್ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪೀಣ್ಯ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿದೆ. ಒಟ್ಟು ನಾಲ್ಕು ದಿನಗಳ ಕಾಲ ಮೇಲ್ಸೇತುವೆ ಬಂದ್ ಆಗಿರಲಿದ್ದು, ಸರ್ವೀಸ್ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.
ಪೀಣ್ಯ ಫ್ಲೈಓವರ್ ಸಾಮರ್ಥ್ಯ ಕುಗ್ಗಿದ ಹಾಗೂ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಲಘು ವಾಹನ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಐಐಎಸ್ಸಿ ತಜ್ಞರ ವರದಿ ಆಧಾರದ ಮೇರೆಗೆ ಕೇಬಲ್ ಅಳವಡಿಸಲಾಗುತ್ತಿದ್ದು, ಒಟ್ಟು 120 ಪಿಲ್ಲರ್ಗಳಿಗೆ 1200 ಕೇಬಲ್ಗಳನ್ನ ಅಳವಡಿಕೆ ಮಾಡಲಾಗಿದೆ. ಸಾಮರ್ಥ್ಯ ಪರೀಕ್ಷೆ ಬಳಿಕ ಭಾರೀ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಫ್ಲೈಓವರ್ ಪಕ್ಕದ ಎನ್ ಎಚ್-4 ಮತ್ತು ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ-ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, -ಎಸ್ಆರ್ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.
ಸಿಎಂಟಿಐ ಜಂಕ್ಷನ್ನಿಂದ ನೆಲಮಂಗಲ ಕಡೆಗೆ ಮೇಲ್ಸೇತುವೆ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫ್ಲೈ ಓವರ್ ಪಕ್ಕದ ಎನ್ ಎಚ್-4 ಮತ್ತು ಸರ್ವಿಸ್ ರಸ್ತೆಯಲ್ಲಿ ಎಸ್ಆರ್ಎಸ್ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ- 8ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.