ವಾರಾಹಿ ನೀರು ಪೂರೈಕೆ ಶೀಘ್ರ

varahi
Published on

ಹೆಬ್ರಿ: ಮರ್ಣೆ ಗ್ರಾಪಂಗೆ ಸೋಮವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಜಲಜೀವನ್ ಮಿಷನ್ ಪ್ರಗತಿ ಕುರಿತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸಹಾಯಕ ಕಾರ್ಯಕಾರಿ ಅಭಿಯಂತ ಸುರೇಂದ್ರನಾಥ್ ಮಾಹಿತಿ ನೀಡಿ, ಮರ್ಣೆ ಗ್ರಾಪಂ ವ್ಯಾಪ್ತಿಯಲ್ಲಿ 1314 ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸದ್ಯಕ್ಕೆ ಬೋರ್‌ವೆಲ್ ಹಾಗೂ ಸ್ಥಳೀಯ ನೀರಿನ ಮೂಲ ಬಳಸಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ವಾರಾಹಿ ಯೋಜನೆ ಪೈಪ್‌ಲೈನ್ ಹಾಗೂ ಟ್ಯಾಂಕ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಡೀಮ್ಡ್ ಹಾಗೂ ಮೀಸಲು ಅರಣ್ಯದ ಕುರಿತು ಅರಣ್ಯ ಇಲಾಖೆ ಅನುಮತಿ ಸಿಕ್ಕ ಬಳಿಕ ಕಾಮಗಾರಿ ಮುಂದುವರಿಸಿ, ಸೆಪ್ಟೆಂಬರ್ ಒಳಗಾಗಿ ಕಾಮಗಾರಿ ಮುಕ್ತಾಯದ ಬಳಿಕ ವರಾಹಿ ನೀರು ಪೂರೈಕೆಯಾಗಲಿದೆ ಎಂದರು.

9/11 ಕುರಿತು ಪ್ರಾಧಿಕಾರ ನಿರಾಕ್ಷೇಪಣಾ ಪತ್ರ ಪಡೆಯಲು ಜನರು ಹೆಣಗಾಟ ನಡೆಸುತ್ತಿದ್ದು ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಪ್ರಾಧಿಕಾರ ಅನುಮತಿ ಕೈಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಪೊಲೀಸರು ಕಂಡಕಂಡಲ್ಲಿ ಲಾರಿ ಸೀಜ್ ಮಾಡುತ್ತಿದ್ದರೂ ಮರಳಿನ ಕೊರತೆ ಸೃಷ್ಟಿಯಾಗಿದೆ ಇದರಿಂದ ಬಡವರಿಗೆ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು. ಸಂಸದರು ಉತ್ತರಿಸಿ ಸರ್ಕಾರ ನಿಗಪಡಿಸಿದ ದರದಲ್ಲಿ ಮರಳು ಸಿಗುತ್ತಿಲ್ಲ ಮರಳು ವ್ಯಾಪಾರೀಕಣದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದರು.

ಮರ್ಣೆ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನ್ಹಸ್, ಕಾರ್ಕಳ ತಹಸೀಲ್ದಾರ್ ಪ್ರದೀಪ್ ಕುಮಾರ್ ಆರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು. ಪಿಡಿಒ ತಿಲಕ್ ರಾಜ್ ಸ್ವಾಗತಿಸಿ, ಗ್ರಾಪಂ ಸದಸ್ಯ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net