ಬಗೆಹರಿದ ಸಿಆರ್‌ಜೆಡ್ ಸಮಸ್ಯೆ

crz
Published on

ಗಂಗೊಳ್ಳಿ: ಮರವಂತೆ ಹೊರಬಂದರು ಕಾಮಗಾರಿಗೆ ಅಡ್ಡಿಯಾಗಿದ್ದ ಸಿಆರ್‌ಜಡ್ ಸಮಸ್ಯೆ ಬಗೆಹರಿಸಿ ಕಾಮಗಾರಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಬಂದರು ಅಭಿವೃದ್ಧಿಗೆ 22 ಕೋಟಿ ರೂ. ಕ್ಯಾಬಿನೆಟ್ ಕ್ಲಿಯರೆನ್ಸ್ ಮಾಡಿದ್ದು, ತಿಂಗಳೊಳಗೆ ಟೆಂಡರ್‌ಗೆ ಬರಲಿದೆ. ಮೀನುಗಾರರ ಸೀ ಆಂಬುಲೆನ್ಸ್ ಬೇಡಿಕೆಗೂ ಸರ್ಕಾರ ಸ್ಪಂದಿಸಿದ್ದು, ಟೆಂಡರ್ ಕರೆಯಲಾಗಿದೆ. ಮೀನುಗಾರರ ಸೀಮೆಎಣ್ಣೆ ಸಮಸ್ಯೆ ಸರ್ಕಾರ ಬಗೆಹರಿಸಿದ್ದು, ಬೇಡಿಕೆಯಷ್ಟು ಸೀಮೆಎಣ್ಣೆ ವಿತರಿಸಲಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಹೇಳಿದರು.

ಮರವಂತೆ ಶ್ರೀ ರಾಮ ಮಂದಿರ ಸಮೀಪ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಕಾರವಾರದಿಂದ ಮಂಗಳೂರುವರೆಗಿನ 320 ಕಿ.ಮೀ ಕರಾವಳಿ ತೀರ ಪ್ರದೇಶದಲ್ಲಿ ಸಿಆರ್‌ಜಡ್ ಕ್ಲಿಯರೆನ್ಸ್ ಹಾಗೂ ಮ್ಯಾಪ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು, ಸೂಚನೆಯಂತೆ ಎಸ್‌ಎಂಪಿ ಮಾಡಲಾಗಿದೆ. ಇದರಿಂದ ರಾಜ್ಯದ ಕರಾವಳಿ ತೀರದಲ್ಲಿ ಯಾವುದೇ ಯೋಜನೆ ಬಂದರೂ ಹೆಚ್ಚೆಂದರೆ ಆರು ತಿಂಗಳೊಳಗೆ ಅನುಷ್ಠಾನಗೊಳುವ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಮೀನುಗಾರರಿಗೆ ಮತ್ತು ಮೀನುಗಾರಿಕೆಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ. ತಿಂಗಳು ಕಳೆದಿದ್ದರೂ ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ತಿಂಗಳ 20ರೊಳಗೆ ಆರಂಭವಾಗದಿದ್ದರೆ ಗುತ್ತಿಗೆದಾರರನ್ನು ರದ್ದುಪಡಿಸಲಾಗುವುದು. ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತಗೊಳ್ಳುವುದಿಲ್ಲ ಎಂದರು.

ನಾಡದೋಣಿ ಮೀನುಗಾರರು ಪ್ರತಿಭಟನೆ ನಡೆಸಿರುವುದಕ್ಕೆ ಆಕ್ಷೇಪ ಇಲ್ಲ. ಲೈಟ್‌ಫಿಶಿಂಗ್ ಬಂದ್ ಬಗ್ಗೆಯಾಗಲಿ, ಪರವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಗೋವಾ, ಕೇರಳ, ಮಹಾರಾಷ್ಟ್ರದಿಂದ ಬಂದು ರಾಜ್ಯದ ಕರಾವಳಿ ತೀರದಲ್ಲಿ ಲೈಟ್‌ಫಿಶಿಂಗ್ ಮಾಡಿದರೆ ಇಲ್ಲಿಯವರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ. ಮೀನುಗಾರಿಕೆ ಉಳಿಯಬೇಕೆಂಬ ಉದ್ದೇಶದಿಂದ ಇದನ್ನು ಒಂದು ಹಂತಕ್ಕೆ ತರಲು ಯೋಚಿಸಲಾಗಿತ್ತು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಸಚಿವ ಮಂಕಾಳ ವೈದ್ಯ, ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್, ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ ಖಾರ್ವಿ, ಮಾರ್ಕೆಟಿಂಗ್ ಸಮಿತಿ ಅಧ್ಯಕ್ಷ ವೆಂಕಟರಮಣ ಖಾರ್ವಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸನ್ನ, ಸ್ಥಳೀಯ ಮೀನುಗಾರ ಮುಖಂಡ ವಾಸುದೇವ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಮರವಂತೆ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ ಸ್ವಾಗತಿಸಿ, ಶ್ರೀಧರ ಖಾರ್ವಿ ಮರವಂತೆ ನಿರೂಪಿಸಿದರು. ಮರವಂತೆ ಶ್ರೀ ರಾಮ ಮಂದಿರದಲ್ಲಿ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.

ರಾಜ್ಯದಲ್ಲಿ ಬುಲ್‌ಟ್ರಾಲ್ ಸಂಪೂರ್ಣ ನಿಲ್ಲಿಸಲಾಗಿದೆ. ಮುಂದೆಯೂ ಅದನ್ನು ಮಾಡಬಾರದೆಂದು ಸೂಚನೆ ನೀಡಲಾಗಿದೆ. ಇಡೀ ದೇಶದಲ್ಲಿ ಲೈಟ್‌ಫಿಶಿಂಗ್ ನಿಲ್ಲಬೇಕಿದೆ, ದೇಶದಲ್ಲಿ ಈ ಬಗ್ಗೆ ಕಾನೂನು ಆಗಬೇಕಿದೆ. ಲೈಟ್‌ಫಿಶಿಂಗ್ ಬಂದ್ ಮಾಡುವ ಬಗ್ಗೆ ಮತ್ತು ಅದರ ಪರವಾಗಿ ನಾನೆಲ್ಲಿಯೂ ಹೇಳಿಕೆ ನೀಡಿಲ್ಲ. ರಾಜ್ಯದಲ್ಲಿ ಸಚಿವ ಸಂಪುಟ ಪುನಃರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. -ಮಂಕಾಳ ವೈದ್ಯ, ಮೀನುಗಾರಿಕೆ ಇಲಾಖೆ ಸಚಿವ https://www.vijayavani.net/swimming-fest-program https://www.vijayavani.net/chara-deval-festival

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net