ಬಾಗಿಲು ಮುಚ್ಚಿದ ವಿಎ ಕಚೇರಿ ಶೌಚಗೃಹ!

gan-11
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯು ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ ನೀರಿನ ಸಂಪರ್ಕವಿಲ್ಲದೆ ಉಪಯೋಗಕ್ಕಿಲ್ಲದಂತಾಗಿದೆ. ಬಾವಿ ಹಾಗೂ ಓವರ್‌ಹೆಡ್ ಟ್ಯಾಂಕ್ ಇದ್ದರೂ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮೀಪದ ಮನೆಗಳನ್ನು ಅವಲಂಬಿಸುವಂತಾಗಿದೆ.

ಗ್ರಾಮ ಆಡಳಿತ ಕಚೇರಿಯು ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಹಳೇ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಶೌಚಗೃಹವಿಲ್ಲದೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸಹಿತ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

ಗಂಗೊಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 65 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶೌಚಗೃಹಕ್ಕೆ ವರ್ಷ ಎರಡು ಉರುಳಿದರೂ ಇದುವರೆಗೂ ನೀರಿನ ಸೌಲಭ್ಯ ಒದಗಿಸಿಲ್ಲ. ಕಚೇರಿಗೆ ಆಗಮಿಸುವ ಸಾರ್ವಜನಿಕರು ಶೌಚಾಲಯಕ್ಕೆ ಹೋಗಬೇಕಾದಾಗ ಸಮೀಪದ ಮನೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಒಡೆದ ನೀರಿನ ಪೈಪ್‌ಗಳು: ಶೌಚಗೃಹದ ಸಮೀಪವೇ ತೆರೆದ ಬಾವಿ ಹಾಗೂ ಓವರ್‌ಹೆಡ್ ಟ್ಯಾಂಕ್ ಇದೆ. ಆದರೆ ಓವರ್‌ಹೆಡ್ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ನೀರಿನ ಪೈಪ್‌ಗಳು ಒಡೆದುಹೋಗಿವೆ. ಬಾವಿಯಲ್ಲಿ ಕಸಕಡ್ಡಿಗಳು ತುಂಬಿ ತುಳುಕುತ್ತಿದ್ದು, ಬಾವಿ ನೀರು ಬಳಸಲು ಯೋಗ್ಯವಾಗಿಲ್ಲ. ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಸಾವಿರಾರು ರೂ. ಖರ್ಚು ಮಾಡಿ ನಿರ್ಮಿಸಿರುವ ಶೌಚಗೃಹ ಉಪಯೋಗಕ್ಕೆ ಬಾರದೆ ಬಾಗಿಲು ಮುಚ್ಚಿದೆ.

ನೀರಿನ ವ್ಯವಸ್ಥೆಗೆ ಅನುದಾನ ಕೊರತೆ

ಶೌಚಗೃಹ ನಿರ್ಮಾಣಕ್ಕೆ ಮೀಸಲಿಟ್ಟ ಅನುದಾನ ಕಡಿಮೆಯಾದ ಕಾರಣ ಪೈಪ್‌ಲೈನ್ ವ್ಯವಸ್ಥೆ ಇನ್ನೂ ಮಾಡಲಾಗಿಲ್ಲ ಎಂದು ಗಂಗೊಳ್ಳಿ ಗ್ರಾಮ ಪಂಚಾಯಿತಿ ತಿಳಿಸಿದೆ. ಇನ್ನಾದರೂ ಗ್ರಾಮ ಆಡಳಿತ ಅಧಿಕಾರಿಗಳ ಆವರಣದಲ್ಲಿ ನಿರ್ಮಿಸಿದ ಶೌಚಗೃಹಕ್ಕೆ ನೀರಿನ ಸಂಪರ್ಕ ಕಲ್ಪಿಸಿ ಬಳಕೆಗೆ ಬಿಟ್ಟುಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ಗಂಗೊಳ್ಳಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಯ ವಠಾರದಲ್ಲಿ ತೆರೆದ ಬಾವಿ ಹಾಗೂ ಓವರ್‌ಹೆಡ್ ಟ್ಯಾಂಕ್ ಇದ್ದರೂ ಶೌಚಗೃಹಕ್ಕೆ ನೀರಿನ ವ್ಯವಸ್ಥೆ ಇಲ್ಲ. ಸಾವಿರಾರು ರೂ. ವ್ಯಯಿಸಿ ಕಟ್ಟಿದ ಶೌಚಗೃಹ ನಿರುಪಯುಕ್ತವಾಗಿದೆ. ಇದರಿಂದ ದೈನಂದಿನ ಕಾರ್ಯಗಳಿಗೆ ಬರುವ ಜನರಿಗೆ ಹಾಗೂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಮಸ್ಯೆಯಾಗುತ್ತಿದೆ. -ನಾಗರಾಜ ಖಾರ್ವಿ, ಸ್ಥಳೀಯ ನಿವಾಸಿ

*65 ಸಾವಿರ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ *ವರ್ಷ ಎರಡಾದರೂ ನೀರಿನ ಸಂಪರ್ಕವಿಲ್ಲ *ಒಡೆದುಹೋಗಿರುವ ಓವರ್‌ಹೆಡ್ ಟ್ಯಾಂಕ್ ಪೈಪ್ * ಸಮೀಪದ ಮನೆಗಳನ್ನು ಅವಲಂಬಿಸಿರುವ ಸಿಬ್ಬಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net