ಕೇಂದ್ರ ಸಚಿವೆಯಿಂದ ತಾರತಮ್ಯ ಧೋರಣೆ

Siddaramaiah
Published on

ಬೆಂಗಳೂರು: ರಾಜ್ಯಕ್ಕೆ ಸಿಗಬೇಕಾದ ತೆರಿಗೆ ಪಾಲು ನೀಡದ, ಕೇಂದ್ರ ದಿಂದ ಕರ್ನಾಟಕಕ್ಕೆ ಬರಬೇಕಾದ 5 ಸಾವಿರ ಕೋಟಿ ರೂ. ತಪ್ಪಿಸಿದ ನಿರ್ಮಲಾ ಸೀತಾರಾಮನ್ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪಿಎಂ ಕೇರ್ಸ್ ನಿಧಿಯಲ್ಲಿ 35 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಕರ್ನಾಟಕದಿಂದ ಮೂರು ಸಾವಿರ ಕೋಟಿ ರೂ. ಹೋಗಿದೆ. ಕಾರ್ವಿುಕರ ಪ್ರಯಾಣ ವೆಚ್ಚಕ್ಕೆ ಈ ದುಡ್ಡನ್ನಾದರೂ ಕೊಡಲು ಮೋದಿಗೆ ಏನು ಕಷ್ಟ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಕರೊನಾ ನಿರ್ವಹಣೆಯಲ್ಲಿ ಪ್ರತಿ ಹಂತದಲ್ಲೂ ಮತ್ತೆ ಮತ್ತೆ ಎಡವಟ್ಟು ಮಾಡಿಕೊಂಡು ಯೂ ಟರ್ನ್ ಸರ್ಕಾರವಾಗಿ ಕಾಣಿಸಿದೆ ಎಂದು ಲೇವಡಿ ಮಾಡಿದರು.

ಇದುವರೆಗೂ ಸರ್ಕಾರ ಕರೊನಾ ನಿರ್ವಹಣೆಗೆ ಎಷ್ಟು ಹಣ ನೀಡಿದೆ, ಅದರಲ್ಲಿ ಎಷ್ಟು ಖರ್ಚಾಗಿದೆ, ಆ ಹಣ ಯಾರಿಗೆ ಸೇರಿದೆ, ದೇಣಿಗೆ ಎಷ್ಟು ಕಲೆಹಾಕಲಾಗಿದೆ ಎಂಬ ವಿಚಾರವಾಗಿ ಒಂದೇ ಒಂದು ಸ್ಪಷ್ಟ ಮಾಹಿತಿಯನ್ನು ಜನರಿಗೆ ನೀಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಕೋವಿಡ್ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹಣಕಾಸು ಆಯೋಗದ ವರದಿ ಪ್ರಕಾರ ರೆವಿನ್ಯೂ ಡಿಫಿಸಿಟ್ ಗ್ರಾಂಟ್ ಆಡಿಯಲ್ಲಿ ನೀಡಲಾಗುವ ಹಣವನ್ನು 14 ರಾಜ್ಯಗಳಿಗೆ ನೀಡಲಾಗಿದೆ. ಆದರೆ, ಕರ್ನಾಟಕಕ್ಕೆ ನೀಡಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ತಾರತಮ್ಯ ಧೋರಣೆ ಅನುಸರಿಸಿದ್ದಾರೆಂದರು.

ತಬ್ಲಿಘಿ ಹೆಸರಲ್ಲಿ ವಾಗ್ವಾದ: ಕರೊನಾ ವ್ಯಾಪಿಸುತ್ತಿರುವ ಬೆನ್ನಲ್ಲೇ ತಬ್ಲಿಘಿಗಳ ಹೆಸರು ಈಗ ರಾಜಕೀಯ ಸಮರಕ್ಕೆ ಸರಕಾಗಿದೆ. ತಬ್ಲಿಘಿಗಳಿಗೆ ಬಿಜೆಪಿ 13 ಪ್ರಶ್ನೆ ಕೇಳಿ ಟೀಕಿಸಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಬ್ಲಿಘಿ ಸಮಾವೇಶಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸುವ ಮೂಲಕ ಕೇಂದ್ರದ ವಿರುದ್ಧ ದನಿ ಎತ್ತಿದ್ದಾರೆ. ದೆಹಲಿಯಲ್ಲಿ ತಬ್ಲಿಘಿ ಸಮಾವೇಶಕ್ಕೆ ಕೇಂದ್ರ ಸರ್ಕಾರವೇ ಪರವಾನಗಿ ಕೊಟ್ಟಿದ್ದು ಮೊದಲನೇ ತಪ್ಪು. ಸೋಂಕು ತಡೆಗಟ್ಟದೇ ಹೋಗಿದ್ದು 2ನೇ ತಪ್ಪು. ಇದಕ್ಕೆ ಕೇಂದ್ರವೇ ಹೊಣೆ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net