More

    ಹೂಡಿಕೆ ಆಕರ್ಷಣೆಗೆ ‘ಟ್ಯಾಕ್ಸ್ ಹಾಲಿಡೆ?’

    ನವದೆಹಲಿ: ಲಾಕ್​ಡೌನ್ ಕಾರಣ ಬಂಡವಾಳ ಹೂಡಿಕೆ ಕ್ಷೀಣಿಸಿದ್ದು, ಹೊಸ ಹೂಡಿಕೆ ಆಕರ್ಷಿಸುವ ಕಂಪನಿಗಳಿಗೆ ತೆರಿಗೆ ವಿನಾಯಿತಿ (ಟ್ಯಾಕ್ಸ್ ಹಾಲಿಡೆ) ನೀಡುವ ಪ್ರಸ್ತಾವನೆಯನ್ನು ವಾಣಿಜ್ಯ ಸಚಿವಾಲಯ ಮುಂದಿಟ್ಟಿದೆ. ಬಂಡವಾಳ ಸಂಗ್ರಹ ಮೊತ್ತವನ್ನಾಧರಿಸಿ 4ರಿಂದ 10 ವರ್ಷದವರೆಗೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

    500 ಮಿಲಿಯನ್ ಡಾಲರ್​ಗೂ (3,777 ಕೋಟಿ ರೂ.) ಹೆಚ್ಚು ಹೊಸ ಹೂಡಿಕೆಯನ್ನು ತರುವ ಕಂಪನಿಗಳಿಗೆ 10 ವರ್ಷದವರೆಗೆ ತೆರಿಗೆಯಿಂದ ಪೂರ್ಣ ವಿನಾಯಿತಿ ನೀಡುವ ಅಂಶ ಈ ಪ್ರಸ್ತಾವನೆಯಲ್ಲಿ ಇದೆ. 100 ಮಿಲಿಯನ್ ಡಾಲರ್ ( 754 ಕೋಟಿ ರೂ.) ಹೂಡಿಕೆ ಆಕರ್ಷಿವ ಕಂಪನಿಗಳಿಗೆ ನಾಲ್ಕು ವರ್ಷದವರೆಗೆ ತೆರಿಗೆ ಬಿಡುವಿನ ಅವಕಾಶ ನೀಡಬೇಕು ಎಂಬ ಸಲಹೆಯನ್ನೂ ಮಾಡಲಾಗಿದೆ. ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜವಳಿ, ಆಹಾರ ಸಂಸ್ಕರಣೆ, ಚಮೋದ್ಯಮ, ಪಾದರಕ್ಷೆಯನ್ನು ತಯಾರಿಸುವಂತಹ ಘಟಕಗಳನ್ನು ಹೊಸ ಬಂಡವಾಳದಿಂದ ಆರಂಭಿಸುವವರಿಗೆ ಆರು ವರ್ಷದವರೆಗೆ ಶೇ. 10ರಷ್ಟು ಅಲ್ಪ ಪ್ರಮಾಣದ ತೆರಿಗೆ ವಿಧಿಸಬೇಕು ಎಂಬ ಪ್ರಮುಖ ಅಂಶಗಳನ್ನು ಪ್ರಸ್ತಾವನೆ ಒಳಗೊಂಡಿದೆ. ಈ ಕುರಿತಂತೆ ಹಣಕಾಸು ಸಚಿವಾಲಯ ಇನ್ನು ಯಾವುದೇ ನಿರ್ಧಾರಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

    ಕರೊನಾ ಸೋಂಕಿನ ಕಾರಣ ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಆರ್ಥಿಕತೆ ಕ್ಷೀಣಿಸಿದ್ದು, ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ತಲುಪಿದೆ. ಏಪ್ರಿಲ್ ಅಂತ್ಯದವರೆಗೆ 12.20 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕತೆ ಚೇತರಿಕೆ ಕಾಣಬೇಕಾದರೆೆ, ಉದ್ಯೋಗಾವಕಾಶ ಮತ್ತೆ ದೊರೆಯಬೇಕಾದರೆ ವ್ಯಾಪಾರೋದ್ಯಮ ಚಟುವಟಿಕೆಗೆ ಅವಕಾಶ ನೀಡುವುದು ಮತ್ತು ಹೊಸ ಬಂಡವಾಳ ಆಕರ್ಷಣೆ ಅನಿವಾರ್ಯವಾಗಿದೆ. ಚೀನಾದಿಂದ ಹೊರಬರುತ್ತಿರುವ ಕಂಪನಿಗಳನ್ನು ಸೆಳೆಯುವುದರಿಂದ ಲಾಕ್​ಡೌನ್ ನಂತರದ ದಿನಗಳಲ್ಲಿ ಬೇಗನೆ ಆರ್ಥಿಕ ಸ್ಥಿರತೆ ಸಾಧಿಸಲು ಸಾಧ್ಯ ಎಂಬ ಸಲಹೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಬಂದಿದೆ. ಹೀಗಾಗಿ ವಾಣಿಜ್ಯ ಸಚಿವಾಲಯ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಪ್ರಸ್ತುತ 50 ಕ್ಲಸ್ಟರ್​ಗಳಲ್ಲಿ ಉದ್ದಿಮೆ ಮೇಲ್ದರ್ಜೆಗೆ ಏರಿಸಲು ಅವಕಾಶ ಇದೆ. ಪ್ರಯೋಗಾಲಯ, ಸಂಶೋಧನಾ ವಲಯಕ್ಕೆ ಸೌಕರ್ಯ, ಔಷಧ ತಯಾರಿಕೆ, ಚಿನ್ನಾಭರಣ ಮತ್ತು ಹರಳು ಉದ್ಯಮ ವಿಸ್ತರಣೆಗೆ, ಪ್ರವಾಸೋದ್ಯಮದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಅವಕಾಶ ಇರುವ ಕಾರಣ ಹೊಸ ಬಂಡವಾಳವನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು ಎಂಬುದು ವಾಣಿಜ್ಯ ಸಚಿವಾಲಯದ ಸಲಹೆ ಆಗಿದೆ.

    ಇದನ್ನೂ ಓದಿ: ಈ ಬಾರಿ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯುವುದೇ?

    ಪ್ರಸ್ತಾವಿತ ನಿಬಂಧನೆ: ತೆರಿಗೆ ವಿನಾಯಿತಿ ಪಡೆಯಲು ಕೆಲವು ನಿಬಂಧನೆಗಳನ್ನು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಹೊಸ ಹೂಡಿಕೆ ಪಡೆದ ಕಂಪನಿ ಜೂನ್ 1ರಿಂದ ಅನ್ವಯವಾಗುವಂತೆ 3 ವರ್ಷದಲ್ಲಿ ಕಾರ್ಯಾರಂಭ ಮಾಡಬೇಕು. ವೈದ್ಯಕೀಯ ಉಪಕರಣ, ಎಲೆಕ್ಟ್ರಾನಿಕ್ ಸಾಮಗ್ರಿ, ದೂರ ಸಂಪರ್ಕ ಉಪಕರಣ, ಪ್ರಮುಖ ಸರಕುಗಳ ವಲಯದಲ್ಲಿ ಹೊಸ ಹೂಡಿಕೆ ಆಕರ್ಷಣೆಗೆ ಅವಕಾಶ ಇದೆ.

    ಚೀನಾ ಬಿಡುತ್ತಿರುವ ಕಂಪನಿಗಳೇ ಟಾರ್ಗೆಟ್: ಕರೊನಾ ಬಿಕ್ಕಟ್ಟಿನ ನಂತರ ಚೀನಾದಿಂದ ಕಾಲ್ತೆಗೆಯುತ್ತಿರುವ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಈ ಪ್ರಸ್ತಾವನೆ ಸಿದ್ಧಪಡಿಸಿಲಾಗಿದೆ. ಭಾರತದಲ್ಲಿ ಬಂಡವಾಳ ಹೂಡುವಂತಹ ಕಂಪನಿಗಳಿಗೆ ಸುಲಭವಾಗಿ ಭೂಮಿ ದೊರೆಯಬೇಕು. ತೆರಿಗೆ ಹೊರೆ ಎನಿಸಬಾರದು ಎಂಬ ಕಳಕಳಿ ಈ ಪ್ರಸ್ತಾವನೆಯಲ್ಲಿ ವ್ಯಕ್ತವಾಗಿದೆ.

    ಏನಿದು ‘ಟ್ಯಾಕ್ಸ್ ಹಾಲಿಡೆ’?

    ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶ. ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ನಿಗದಿತ ಅವಧಿಯ ವರೆಗೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ.

    ಇದನ್ನೂ ಓದಿ: `ಮಹಾ’ ಕಾರ್ಮಿಕರಿಂದ ಆಪತ್ತಾಗದಿರಲಿ

    ವುಹಾನ್​ನ 1 ಕೋಟಿ ಜನರಿಗೆ ಕರೊನಾ ಪರೀಕ್ಷೆ

    ವುಹಾನ್ (ಚೀನಾ): ಕರೊನಾ ವೈರಸ್ ಮೊದಲು ಕಾಣಿಸಿಕೊಂಡ ವುಹಾನ್​ನಲ್ಲಿ ಮತ್ತೆ ಹೊಸ ಸೋಂಕು ಪ್ರಕರಣಗಳು ಕಂಡು ಬಂದಿರುವುದರಿಂದ ವುಹಾನ್ ನಗರದ ಎಲ್ಲ 1.1 ಕೋಟಿ ಜನರ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. 76 ದಿನಗಳ ಲಾಕ್​ಡೌನ್ ಮುಗಿದ ಹಿನ್ನೆಲೆಯಲ್ಲಿ ಏಪ್ರಿಲ್ 8ರಂದು ವಾಣಿಜ್ಯ ಚಟುವಟಿಕೆಗಳು ಆರಂಭವಾಗಿದ್ದವು. ಹಲವು ವಾರಗಳ ನಂತರ ಅನೇಕ ಕ್ಲಸ್ಟರ್​ಗಳಲ್ಲಿ ಸಾಂಕ್ರಾಮಿಕ ರೋಗ ಮತ್ತೆ ತಲೆಯೆತ್ತಿರುವುದರಿಂದ ನಗರದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. 10 ದಿನದೊಳಗೆ ಪರೀಕ್ಷೆ ಪೂರ್ಣಗೊಳಿಸಲು ಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಆದರೆ ತಪಾಸಣೆ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ವುಹಾನ್​ನ ಡೊಂಗ್​​​ಕ್ಸಿಹು ಜಿಲ್ಲೆಯ ಜನವಸತಿ ಆವರಣವೊಂದರಲ್ಲಿ ಭಾನುವಾರ ಮತ್ತು ಸೋಮವಾರ ಆರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ನಿಯಂತ್ರಿಸುವಲ್ಲಿ ಚೀನಾ ಯಶಸ್ವಿಯಾಗಿದ್ದರೂ ಮತ್ತೆ ಕೆಲವರಲ್ಲಿ ರೋಗ ಲಕ್ಷಣ ಕಾಣಿಸಲಾರಂಭವಾಗಿದೆ. ವುಹಾನ್​ನಲ್ಲಿ ಒಟ್ಟು 3,869 ಜನರು ಕರೊನಾಗೆ ಬಲಿಯಾಗಿದ್ದಾರೆ.

    ಏರ್ ಇಂಡಿಯಾ ಮುಖ್ಯ ಕಚೇರಿ ಸೀಲ್​ಡೌನ್

    ದೆಹಲಿಯಲ್ಲಿರುವ ಏರ್ ಇಂಡಿಯಾ ಮುಖ್ಯ ಕಚೇರಿಯ ಸಹಾಯಕ ಕೆಲಸಗಾರನಲ್ಲಿ ಕರೊನಾ ಸೋಂಕು ದೃಢವಾಗಿದೆ. ಹೀಗಾಗಿ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್​ಡೌನ್ ಮಾಡಲಾಗಿದೆ. ಸೋಂಕಿತನನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅಧ್ಯಕ್ಷರು, ವ್ಯವಸ್ಥಾಪಕಾ ನಿರ್ದೇಶಕರು ಸೇರಿ ಎಲ್ಲ ಸಿಬ್ಬಂದಿಗೂ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ. ಕಚೇರಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೂನ್​ವರೆಗೂ ನ್ಯೂಯಾರ್ಕ್ ಬಂದ್

    ಅಮೆರಿಕದಲ್ಲಿ ಕರೊನಾದ ಪ್ರಮುಖ ಹಾಟ್​ಸ್ಪಾಟ್ ಆಗಿರುವ ನ್ಯೂಯಾರ್ಕ್ ನಗರ ಜೂನ್​ವರೆಗೂ ಸ್ತಬ್ಧವಾಗಿರಲಿದೆ ಎಂದು ಅಲ್ಲಿನ ಮೇಯರ್ ಬಿಲ್ ದೆ ಬ್ಲಾಸಿಯೊ ಹೇಳಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಕರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಹೊಸ ರೋಗಿಗಳ ಪ್ರಮಾಣ ಭಾರಿ ಸಂಖ್ಯೆಯಲ್ಲಿ ಇಳಿಕೆಯಾಗಿದೆಯಾದರೂ, ಈ ಸುಧಾರಣೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೂನ್​ವರೆಗೂ ಕಾಯುವುದು ಅನಿವಾರ್ಯ. ನಗರವನ್ನು ಮತ್ತೆ ಯಥಾಸ್ಥಿತಿಗೆ ತರಲು ನಾವಿನ್ನೂ ಸಿದ್ಧರಿಲ್ಲ ಎಂದು ಬಿಲ್ ಹೇಳಿದ್ದಾರೆ. ಅಮೆರಿಕದ ಪ್ರಮುಖ ಮಹಾನಗರಗಳಲ್ಲಿ ನ್ಯೂಯಾರ್ಕ್ ಪ್ರಮುಖವಾಗಿದೆ. ಇಲ್ಲಿನ ಜನಸಂಖ್ಯೆ ಸುಮಾರು 83 ಲಕ್ಷ . 785 ಕಿಮೀ ವ್ಯಾಪ್ತಿಯನ್ನು ಇದು ಹೊಂದಿದೆ. ವಿಶ್ವದ ಪ್ರಮುಖ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿದೆ.

    ಹೂಡಿಕೆ ಆಕರ್ಷಣೆಗೆ 'ಟ್ಯಾಕ್ಸ್ ಹಾಲಿಡೆ?'

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts