

ಬೆಂಗಳೂರು: ನಮ್ಮ ದೇಶ ಹಲವು ವೈವಿಧ್ಯತೆಗಳಿಂದ ಕೂಡಿದೆ ಎಂದ ಮಾತ್ರಕ್ಕೆ ವೈವಿಧ್ಯತೆಯ ನೆಪದಲ್ಲಿ ದೇಶದ ಸಮಗ್ರತೆ, ಐಕ್ಯತೆ, ಸಾಮರಸ್ಯವನ್ನು ಬಲಿಕೊಡಲಾಗದು. ಭಾರತದ ಎಲ್ಲ ನಾಗರಿಕರು ಸಮಾನ ಹಕ್ಕುಗಳನ್ನು, ಸೌಲಭ್ಯಗಳನ್ನು ಪಡೆಯುವಂತಾಗಲು ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂದು ರಾಜಕೀಯ ವಿಶ್ಲೇಷಕ ಆನಂದ ರಂಗನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಅನಂತಕುಮಾರ್ ಪ್ರತಿಷ್ಠಾನವು ವರ್ಚುವಲ್ ಮೀಟ್ನಲ್ಲಿ ಶನಿವಾರ ಆಯೋಜಿಸಿದ್ದ "ದೇಶ ಮೊದಲು' ಸಂವಾದದಲ್ಲಿ "ಏಕರೂಪ ನಾಗರಿಕ ಸಂಹಿತೆ' ಕಾನೂನು ಜಾರಿಯ ಅಗತ್ಯದ ಕುರಿತು ಅವರು ಮಾತನಾಡಿದರು.
ಹೈಕೋರ್ಟ್ ನ್ಯಾಯವಾದಿ ಲಕ್ಷಿ$್ಮ ಅಯ್ಯಂಗಾರ್ ಮಾತನಾಡಿ, ಜಾತಿ-ಧರ್ಮಗಳನ್ನು ಆಧರಿಸಿದ ಕಾನೂನು ರಚಿಸಲು ಭಾರತವು ಒಂದೇ ಧರ್ಮ ಪ್ರತಿಪಾದಿಸುವ ದೇಶವಲ್ಲ. ಇದು ಜಾತ್ಯತಿತ ರಾಷ್ಟ್ರ. ಆದ್ದರಿಂದ ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೆ ಸಮಾನ ಗೌರವ ಸಿಗುವಂತಾಗಲು ಏಕರೂಪದ ನಾಗರಿಕ ಸಂಹಿತೆ ಅಗತ್ಯವಿದೆ. ಇದರಿಂದ, ಧರ್ಮಾಧರಿತ ವ್ಯಕ್ತಿಗತ ಕಾನೂನುಗಳಿಗೆ ಅಡ್ಡಿಯಾಗುವುದಿಲ್ಲ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮಾತನಾಡಿ, ಯಾವುದೋ ಒಂದು ಧರ್ಮದವರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ದೇಶದ ಉಳಿದ ಧಮೀರ್ಯರ ಹಿತವನ್ನು ಬಲಿಕೊಡಲಾಗದು. ಅಷ್ಟಕ್ಕೂ, ಮುಸ್ಲಿಂ ಧರ್ಮಕ್ಕೆ ಈ ಕಾನೂನು ವಿರೋಧವಿದೆ ಎಂಬುದು ಮತ ಬ್ಯಾಂಕಿಗಾಗಿ ಕೆಲವು ರಾಜಕೀಯ ಮುಖಂಡರು ಹಬ್ಬಿಸುತ್ತಿರುವ ವದಂತಿ ಮಾತ್ರ ಎಂದು ತಿಳಿಸಿದರು.
ಇಲ್ಲಿಯವರೆಗೂ ಸಂವಿಧಾನದನ್ವಯ ಜಾತ್ಯತಿತತೆಯನ್ನು ಪಾಲಿಸಿಕೊಂಡೇ ಬಂದಿದ್ದು, ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಯಾದ ಮೇಲೂ ಮುಂದುವರಿಯಲಿದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಬಾರದು ಎಂಬುದು ಈ ಕಾನೂನಿನ ಆಶಯವಾಗಿದೆ ಎಂದು ಹೇಳಿದರು.
ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ. ಕೃಷ್ಣಭಟ್ ಮಾತನಾಡಿ, ಏಕರೂಪ ನಾಗರಿಕ ಸಂಹಿತೆಯ ಜಾರಿಯು ದೇಶದ ಗೌರವವಾಗಿದೆ. ಅದು ಒಂದು ಸಮೂಹದ ವಿರೋಧಿಯಲ್ಲ. ಈ ಕಾನೂನಿನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಆಶಯವಿದೆ ಎಂದರು.
ಅದಮ್ಯಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಐಶ್ವರ್ಯ ಅನಂತಕುಮಾರ್, ಸುಜಿತ್ ಕುಮಾರ್ ಮತ್ತಿತರರಿದ್ದರು.