ಸಾವಿನ ಕುಣಿಕೆಯಾಗ್ತಿದೆ ಒಎಫ್​​ಸಿ ಕೇಬಲ್!

OFC
Published on

ಬೆಂಗಳೂರು:ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಜೋತುಬಿದ್ದಿರುವ ಅನಧಿಕೃತ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್​​ಸಿ) ಮಾಫಿಯಾ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜಧಾನಿಯಲ್ಲಿ ರಸ್ತೆ, ಮರ, ವಿದ್ಯುತ್ ಕಂಬ, ಉದ್ಯಾನ, ಸಾರ್ವಜನಿಕ ಸ್ಥಳ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಜೇಡರ ಬಲೆಯಂತೆ ಒಎ್ಸಿ ಕೇಬಲ್‌ಗಳು ವ್ಯಾಪಿಸಿ, ದ್ವಿಚಕ್ರವಾಹನ ಸವಾರರಿಗೆ, ಪಾದಚಾರಿಗಳಿಗೆ ಸಾವಿನ ಕುಣಿಕೆಯಾಗಿ ಪರಿಣಮಿಸಿವೆ. ಅನಧಿಕೃತ ಕೇಬಲ್‌ಗಳ ತೆರವುಗೊಳಿಸುವಂತೆ ಹೈಕೋರ್ಟ್ ಹಲವು ಬಾರಿ ಚಾಟಿ ಬೀಸಿದ್ದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ನಗರದಲ್ಲಿ 13 ಟೆಲಿಕಾಂ ಕಂಪನಿಗಳಿಂದ 84.23 ಲಕ್ಷ ಮೀಟರ್ ಕೇಬಲ್ ಹಾಗೂ ಅಂತರ್ಜಾಲ ಸೇವೆ ಕಂಪನಿಗಳಿಂದ 13.15 ಲಕ್ಷ ಮೀಟರ್ ಕೇಬಲ್ ಅಳವಡಿಸಲಾಗಿದೆ. ಅನಧಿಕೃತ ಕೇಬಲ್ ತೆರವಿಗೆ ಹೈಕೋರ್ಟ್ ಪಾಲಿಕೆಗೆ ಗಡುವು ನೀಡುತ್ತ ಬರುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಟೆಲಿಕಾಂ ಕಂಪನಿಗಳ ಜತೆ ಶಾಮೀಲಾಗಿ ಪರಿಣಾಮಕಾರಿ ಕೇಬಲ್ ತೆರವು ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ. ಮರಗಳಲ್ಲಿ ನೇತಾಡುವ ಕೇಬಲ್‌ಗಳು ತುಂಬ ಅಪಾಯಕಾರಿಯಾಗಿದ್ದು, ಬೈಕ್‌ಗೆ ಅಥವಾ ಸವಾರರು ಬಿದ್ದು ಅನಾಹುತ ಸಂಭವಿಸಿದ ಘಟನೆಗಳು ಮರುಕಳಿಸುತ್ತಿವೆ.

ನೆಲದಡಿ ಅಂದಾಜಿಗೂ ಸಿಗದಷ್ಟು ಪ್ರಮಾಣದಲ್ಲಿ ಒಎಫ್‌ಸಿ ಕೇಬಲ್ ಅಕ್ರಮವಾಗಿ ಹರಡಿಕೊಂಡಿದೆ. ಪಾಲಿಕೆಯನ್ನು ನಿಯಂತ್ರಿಸುವ ಮಾಫಿಯಾಗಳಲ್ಲಿ ಒಎಫ್‌ಸಿ ಕೇಬಲ್ ಮಾಫಿಯಾ ಕೂಡ ಒಂದು. ಹೀಗಾಗಿಯೇ ಅಧಿಕಾರಿಗಳು ಅನಧಿಕೃತ ಕೇಬಲ್ ತೆರವುಗೊಳಿಸಲು ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ತೋರುತ್ತಿಲ್ಲ. ಟೆಲಿಕಾಂ ಸೇವಾ ಕಂಪನಿಗಳು 10 ಕಿ.ಮೀ. ಉದ್ದದ ಒಎ್ಸಿ ಅಳವಡಿಸಲು ಅನುಮತಿ ಪಡೆದು ಹತ್ತು ಪಟ್ಟು ಅಧಿಕ ಡಕ್ಟ್ ಅಳವಡಿಸಿ ಕೋಟ್ಯಂತರ ರೂ. ಶುಲ್ಕ ವಂಚಿಸುತ್ತಿವೆ. ಒಂದು ಸಂಸ್ಥೆಯು ಡಕ್ಟ್ ಅಳವಡಿಕೆಗೆ ಅನುಮತಿ ಪಡೆದರೆ, ಇತರೆ ಮೂರ್ನಾಲ್ಕು ಸಂಸ್ಥೆಗಳು ಅಕ್ರಮವಾಗಿ ಅದರಲ್ಲಿ ಕೇಬಲ್ ಹಾಕುತ್ತಿವೆ. ಈ ಅಕ್ರಮವನ್ನು ಪರಿಶೀಲಿಸುವ ತಾಂತ್ರಿಕ ನೈಪುಣ್ಯ ಪಾಲಿಕೆ ಅಧಿಕಾರಿಗಳಿಗಿಲ್ಲ. ನೆಲದಡಿ ಹರಡಿಕೊಂಡಿರುವ ಒಎಫ್‌ಸಿ ಕೇಬಲ್ ಜಾಲವು ರಸ್ತೆಗುಂಡಿಗಳ ಸೃಷ್ಟಿಗೂ ಕಾರಣವಾಗಿದೆ. ಈ ಗುಂಡಿ ಮುಚ್ಚಲು ಬಿಬಿಎಂಪಿ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಆದರೂ, ಡಾಂಬರೀಕರಣ ಹಾಕಿದ ರಸ್ತೆಗಳನ್ನು ರಾತ್ರೋರಾತ್ರಿ ಅಗೆದು ಕೇಬಲ್ ಅಳವಡಿಸಲಾಗುತ್ತಿದೆ. ಅಲ್ಲದೆ, ನೆಲದಡಿ ಮಾತ್ರ ಕೇಬಲ್ ಅಳವಡಿಸಲು ಬಿಬಿಎಂಪಿ ಅನುಮತಿ ನೀಡುತ್ತಿದೆ. ರಸ್ತೆ, ಫುಟ್‌ಪಾತ್, ಮರ, ವಿದ್ಯುತ್ ಕಂಬಗಳಲ್ಲಿ ನೇತಾಡುವಂತೆ ಕೇಬಲ್ ಹಾಕಲು ಅವಕಾಶವೇ ಇಲ್ಲ. ಆದರೂ ಸಾವಿರಾರು ಕಿ.ಮೀ. ಉದ್ದದ ಮಾರ್ಗದಲ್ಲಿ ಅನಧಿಕೃತ ಕೇಬಲ್‌ಗಳು ನೇತಾಡುತ್ತಿವೆ.

ಕಠಿಣ ಕ್ರಮ ಇಲ್ಲ:

ಒಎಫ್‌ಸಿ ಅಳವಡಿಕೆ ವೇಳೆ ಸೇವಾ ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳ ದೊಡ್ಡ ಪಟ್ಟಿಯೇ ಇದೆ. ಹೊಸದಾಗಿ ಟಾರು ಹಾಕಿದ ರಸ್ತೆಗಳಲ್ಲಿ ಕನಿಷ್ಠ ಮೂರು ವರ್ಷಗಳವರೆಗೆ ಒಎಫ್‌ಸಿ ಕೇಬಲ್ ಹಾಕಲು ಅವಕಾಶವಿಲ್ಲ. ಅನುಮತಿ ಪಡೆದ 2 ತಿಂಗಳಲ್ಲಿ ಕೇಬಲ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಬೇಕು. ಕೇವಲ 2 ಕಿ.ಮೀ. ಮಾರ್ಗದಲ್ಲಿ ಎಚ್‌ಡಿಡಿ ಮಾದರಿಯಲ್ಲಿ ಕೇಬಲ್ ಅಳವಡಿಸಲು ಅವಕಾಶ ನೀಡಬೇಕಿದೆ. ಅನುಮತಿ ಪಡೆಯದೆ ರಸ್ತೆ ಅಗೆಯುವ ಕಂಪನಿಗಳಿಗೆ 25 ಲಕ್ಷ ರೂ. ದಂಡ ವಿಧಿಸಬೇಕು. ಆದರೆ, ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಅನುಮತಿ ಪಡೆಯದೆಯೇ ರಾತ್ರೊರಾತ್ರಿ ರಸ್ತೆ ಅಗೆದು ಒಎಫ್‌ಸಿ ಕೇಬಲ್‌ಗಳನ್ನು ಅಕ್ರಮವಾಗಿ ಅಳವಡಿಸುವುದು ಮುಂದುವರಿದಿದೆ.

12,274 ಕಿ.ಮೀ.ಒಎಫ್‌ಸಿಗೆ ಅನುಮತಿ:

ನಗರದಲ್ಲಿ 14 ಸಾವಿರ ಕಿ.ಮೀ. ಉದ್ದದ ರಸ್ತೆ ಇದೆ. ಇಷ್ಟೂ ರಸ್ತೆಯಲ್ಲಿ ಟೆಲಿಕಾಂ ಸೇವಾ ಕಂಪನಿಗಳು ಕೇಬಲ್ ಅಳವಡಿಸಿವೆ. ನೆಲದಾಳದಲ್ಲಿ ಅಳವಡಿಸುವುದಕ್ಕಿಂತ ಮೇಲ್ಭಾಗದಲ್ಲಿ ಕೇಬಲ್ ಎಳೆದಿರುವುದೇ ಹೆಚ್ಚು. ಟೆಲಿಕಾಂ ಕಂಪನಿಗಳು 12,274 ಕಿ.ಮೀ. ಮಾರ್ಗದಲ್ಲಿ ಒಎಫ್‌ಸಿ ಕೇಬಲ್ ಅಳವಡಿಸಲು ಪಾಲಿಕೆಯಿಂದ ಅನುಮತಿ ಪಡೆದಿವೆ. ಒಎಫ್‌ಸಿ ಕೇಬಲ್‌ಗಳು ರಸ್ತೆ, ಫುಟ್‌ಪಾತ್‌ಗಳನ್ನಷ್ಟೆ ಆವರಿಸಿಕೊಂಡಿಲ್ಲ. ರಸ್ತೆ ಬದಿಯ ಚರಂಡಿ, ನೆಲದಾಳದ ಒಳಚರಂಡಿ ಕೊಳವೆಗಳನ್ನೂ ಆವರಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net