

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸದಸ್ಯರ ಸೇವೆಯೇ ಜೀವಾಳ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಉಜಿರೆ ರಬ್ಬರ್ ಸೊಸೈಟಿ ವರದಿ ವರ್ಷದಲ್ಲಿ 29 ಲಕ್ಷ ರೂ.ಗಿಂತ ಅಧಿಕ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಉಜಿರೆಯಲ್ಲಿ ಶನಿವಾರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3,828 ಸದಸ್ಯರನ್ನು ಹೊಂದಿರುವ ಸಂಘ 1.29 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಸಂಘದಲ್ಲಿ 26 ಕೋಟಿ ರೂ.ಗಿಂತ ಅಧಿಕ ಠೇವಣಿಗಳಿವೆ. ಸಂಘವು ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಒಟ್ಟು 33 ಖರೀದಿ ಶಾಖೆಗಳನ್ನು ಹೊಂದಿದೆ. ಪ್ರಸಕ್ತ ವರ್ಷದಲ್ಲಿ 16,661 ಟನ್ ರಬ್ಬರ್ ಖರೀದಿಸಲಾಗಿದ್ದು, ಗ್ರಾಹಕರಿಗೆ ಕಿಲೋ ಒಂದರ ಸರಾಸರಿ 191.71 ರೂ. ಧಾರಣೆ ಸಿಕ್ಕಿದೆ. ಸದಸ್ಯರಿಂದ ಖರೀದಿಸಿದ ರಬ್ಬರನ್ನು ದೇಶಾದ್ಯಂತ ಮಾರಾಟ ಮಾಡಲಾಗಿದ್ದು, ಸದಸ್ಯರ ಉತ್ಪನ್ನಗಳಿಗೆ ಉತ್ತಮ ಧಾರಣೆ ಸಿಗುವಂತೆ ಪ್ರಯತ್ನಿಸಲಾಗಿದೆ ಎಂದರು.
ಉಪಾಧ್ಯಕ್ಷ ಅನಂತ ಭಟ್ ಎಂ., ನಿರ್ದೇಶಕಿ ಜಯಶ್ರೀ ಡಿ.ಎಂ., ಆರ್.ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯಸ್ ವೇಗಸ್, ಪದ್ಮ ಗೌಡ ಎಚ್., ಕೆ.ಜೆ.ಆಗಸ್ಟಿನ್, ವಿ.ವಿ.ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಶಶಿಧರ ಡೋಂಗ್ರೆ, ವಿಶೇಷ ಆಹ್ವಾನಿತ ಅಬ್ರಾಹಂ ಬಿ.ಎಸ್. ಉಪಸ್ಥಿತರಿದ್ದರು. ಸಿಇಒ ರಾಜು ಶೆಟ್ಟಿ ವರದಿ ವಾಚಿಸಿದರು. ಪ್ರಸಕ್ತ ಸಾಲಿನಲ್ಲಿ ಅಗಲಿದ ಮಾಜಿ ಉಪಾಧ್ಯಕ್ಷರು, ನಿರ್ದೇಶಕರಾದ ಪದ್ಮನಾಭ ಮಾಣಿಂಜ, ಇ.ಸುಂದರ ಗೌಡ ಅವರಿಗೆ ನುಡಿನಮನ ಸಲ್ಲಿಸಲಾಯಿತು.ಆರೋಗ್ಯ ಇಲಾಖೆಯಿಂದ ಡೆಂೆ ಕುರಿತು ಜಾಗೃತಿ ಮೂಡಿಸಲಾಯಿತು.
ಸಾಧಕರಿಗೆ ಗೌರವಾರ್ಪಣೆ
ಅತಿ ಹೆಚ್ಚು ರಬ್ಬರ್ ಖರೀದಿಸಿದ ಆರ್‌ಪಿಎಸ್, ಸಹಕಾರಿ ಸಂಘ ಹಾಗೂ ಏಜೆಂಟ್‌ಗಳನ್ನು ಗೌರವಿಸಲಾಯಿತು. ಆರ್‌ಪಿಎಸ್‌ಗಳ ಪೈಕಿ ಮೂರ್ಜೆ, ಹೊಸ್ಮಾರು, ಪಡಂಗಡಿ, ಸಹಕಾರಿ ಸಂಘಗಳ ಪೈಕಿ ಅಜೆಕಾರು, ಬೆಳಾಲು ಪ್ಯಾಕ್ಸ್, ಮುಂಡಾಜೆ ಪ್ಯಾಕ್ಸ್‌ಗಳ ಅಧ್ಯಕ್ಷರನ್ನು, ವೈಯಕ್ತಿಕವಾಗಿ ಅತಿ ಹೆಚ್ಚು ರಬ್ಬರ್ ಖರೀದಿಸಿದ ಟಿ.ಎ.ಜೋಸ್ ಜಡ್ಕಲ್, ಮೌಲಿ ಎಲ್ಡಾಸ್, ಪಾಪಚ್ಚನ್ ಅವರನ್ನು ಗೌರವಿಸಲಾಯಿತು. ಸಂಘದ ರಬ್ಬರ್ ಖರೀದಿಸುವ ಇತರ ಕೇಂದ್ರಗಳ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.