

ಉಡುಪಿ: ನಿಮ್ಮೊಳಗಿನ ಪ್ರತಿಭೆಗಳಿಗೆ ನೀವೇ ಸ್ಫೂರ್ತಿಯಾಗಬೇಕು. ಅದರಿಂದ ಸಮಾಜ ಗುರುತಿಸುವಂಥ ಸಾಧನೆ ಮಾಡುವಂತಾಗಬೇಕು. ಕಲೆಯೊಂದಿಗಿನ ಬದುಕು ಇಂದಿನ ಯುಗದಲ್ಲಿ ಅನಿವಾರ್ಯ. ಕಲಾವಿದರಿಗೆ ಸಾಮಾಜಿಕ ಮನ್ನಣೆಯ ಅಗತ್ಯತೆಯಿದೆ. ಅದರಿಂದ ಅವರಿಗೆ ಖಂಡಿತ ಸ್ಫೂರ್ತಿ ನೀಡಬಲ್ಲದು ಎಂದು ಚಿತ್ರ ಕಲಾವಿದ, ಮಂಗಳೂರು ಪೆಡ್' ಖ್ಯಾತಿಯ ಕರಣ್ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್ನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ "ಜ್ಞಾನಂ' ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ಸ್ಪರ್ಧೆಗಳ ಫೆಸ್ಟ್ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಚ್ಛಾಶಕ್ತಿ ಅಗತ್ಯ
ಕಾಲೇಜ್ನ ಆಡಳಿತ ಮಂಡಳಿಯ ಗೌರವ ಸದಸ್ಯ ಪ್ರೊ.ರತ್ನಕುಮಾರ್ ಮಾತನಾಡಿ, ಕಾಲೇಜ್ನ ಸ್ಥಾಪಕರಾದ ವಿಬುಧೇಶ ತೀರ್ಥ ಶ್ರೀಪಾದರ ಸದೃಢ ಸಂಕಲ್ಪದಿಂದ ಇಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಶ್ರೀಗಳ ಶೈಕ್ಷಣಿಕ ಕ್ಷೇತ್ರದ ಎಲ್ಲ ಸಂಕಲ್ಪವೂ ಸಾಕಾರಗೊಳ್ಳುವಲ್ಲಿ ನಿಮ್ಮ ಇಚ್ಛಾಶಕ್ತಿಯೇ ಮೂಲವಾಗಲಿ. ಭವಿಷ್ಯದ ಭವ್ಯ ಭಾರತದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಿ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್ ಹೊಳ್ಳ ಶುಭ ಹಾರೈಸಿದರು.
ಜ್ಞಾನಂ ಫೆಸ್ಟ್ನಲ್ಲಿ ಸಮಗ್ರ ಪ್ರಶಸ್ತಿ ವಿಜೇತರಾದ ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜ್ ಪ್ರಥಮ, ಉಡುಪಿಯ ಎಂಜಿಎಂ ಕಾಲೇಜ್ ದ್ವಿತೀಯ ಸ್ಥಾನ ಗಳಿಸಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್., ಜ್ಞಾನಂ ಫೆಸ್ಟ್ನ ಸಂಯೋಜಕಿ ಲವಿಟಾ ಡಿಸೋಜ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿನಾಯಕ ಪೈ ಬಿ. ಮತ್ತು ಡಾ. ಪ್ರಜ್ಞಾ ಮಾರ್ಪಳ್ಳಿ, ವಿದ್ಯಾರ್ಥಿ ಸಂಘದ ನಾಯಕ ವಿಶ್ವಾಸ್ ಕರ್ವಾಲೋ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೀತಮ್ ಶೆಟ್ಟಿ ಸ್ವಾಗತಿಸಿದರು. ಶೋಭಿತಾ ಹೆಗಡೆ ವಂದಿಸಿದರು. ವಿದ್ಯಾರ್ಥಿ ಶರತ್ ಕಾರ್ಯಕ್ರಮ ನಿರೂಪಿಸಿದರು.
ನಾನು ಬಿಡಿಸಿದ ಹನುಮಾನ್ ದೇವರ ಚಿತ್ರವು ನನಗೆ ಅರಿವಿಲ್ಲದೆಯೇ ಜಗತಸಿದ್ಧವಾಗಿ, ಪ್ರಧಾನಿ ನರೇಂದ್ರ ಮೋದಿ ಅವರೂ ಶ್ಲಾಘಿಸಿದರು. ಆಗ ನಾನು ಕಲಾವಿದರಿಗೆ ಮನ್ನಣೆಯಿದೆ ಎಂಬ ಸತ್ಯ ಕಂಡುಕೊಂಡೆ. ಯಾವುದೇ ಅಪೇಕ್ಷೆಯಿಲ್ಲದೆ ಕಲೆಯಲ್ಲಿ ತೊಡಗಿಕೊಂಡಾಗ ಅಪರಿಮಿತ ಆತ್ಮತೃಪ್ತಿ ಲಭಿಸುತ್ತದೆ.
ಕರಣ್ ಆಚಾರ್ಯ. ಖ್ಯಾತ ಚಿತ್ರ ಕಲಾವಿದ.